ಗುರುಪುರದಲ್ಲಿ ಭೀಕರ ರಸ್ತೆ ಅಪಘಾತ; ಚಾಲಕರಿಬ್ಬರು ಗಂಭೀರ
ಮೂಡುಬಿದ್ರೆ, ಎ. 8: ಮಂಗಳೂರಿನಿಂದ ಮೂಡುಬಿದ್ರೆ ತೆರಳುತ್ತಿದ್ದ ಕೆಕೆಬಿ ಟ್ರಾವೆಲ್ಸ್ ಹೆಸರಿನ ಎಕ್ಸೆಸ್ ಬಸ್ ಮತ್ತು ಕಂಟೇನರ್ ಲಾರಿ ಗುರುಪುರ ಹೆದ್ದಾರಿ ತಿರುವಿನಲ್ಲಿ ಮುಖಾಮುಖಿ ಡಿಕ್ಕಿಯಾಗಿದ್ದು ಚಾಲಕರಿಬ್ಬರು ತೀವ್ರ ಗಾಯಗೊಂಡಿದ್ದಾರೆ. ಹಲವು ಪ್ರಯಾಣಿಕರಿಗೂ ಗಾಯಗಳಾಗಿವೆ.
ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಘಟನೆ ನಡೆದಿದ್ದು ಓವರ್ ಟೇಕ್ ಮಾಡಲು ಬಂದ ಬಸ್ಸಿಗೆ ಕಂಟೇನರ್ ಲಾರಿ ಡಿಕ್ಕಿಯಾಗಿದ್ದು ಮುಂಭಾಗ ನಜ್ಜುಗುಜ್ಜಾಗಿದೆ. ಅಲ್ಲದೆ, ಲಾರಿಯ ಚಾಲಕ ಎಡೆಯಲ್ಲಿ ಸಿಕ್ಕಿಕೊಂಡು ಸ್ಥಳೀಯರ ಹರಸಾಹಸದ ಬಳಿಕ ಹೊರ ತೆಗೆಯಲಾಯಿತು.
ಇತರೇ ವಾಹನಗಳ ಚಾಲಕರು, ಪ್ರಯಾಣಿಕರು, ಸ್ಥಳೀಯರು ಸೇರಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಸ್ಸಿನಲ್ಲಿದ್ದ ಏಳು ಮಂದಿ ಪ್ರಯಾಣಿಕರಿಗೆ ಗಾಯವಾಗಿದೆ. ಬಸ್ ಚಾಲಕ ಮತ್ತು ಲಾರಿಯ ಚಾಲಕರಿಗೆ ಕಾಲು ಮತ್ತು ಕೈಗೆ ಹೆಚ್ಚು ಪೆಟ್ಟು ಬಿದ್ದಿದೆ. ಹುಬ್ಬಳ್ಳಿ ಮೂಲದ ಕಂಟೇನರ್ ಲಾರಿಯಲ್ಲಿ ಭಾರೀ ಸರಕು ತುಂಬಿಕೊಂಡಿದ್ದು ಬಸ್ಸಿಗೆ ಗುದ್ದಿ ನಿಂತುಬಿಟ್ಟಿದೆ. ಇದರಿಂದಾಗಿ ಎರಡೂ ವಾಹನಗಳ ಮುಂಭಾಗ ಒಂದಕ್ಕೊಂದು ಅಂಟಿಕೊಂಡು ಜಖಂ ಆಗಿತ್ತು.
ಮಂಗಳೂರು- ಮೂಡುಬಿದ್ರೆ ನಡುವೆ ಚಲಿಸುವ ಖಾಸಗಿ ಬಸ್ಸುಗಳನ್ನು ಅತಿ ವೇಗದಿಂದ ಚಲಾಯಿಸುವುದು, ಪ್ರಯಾಣಿಕರ ಜೀವದ ಜೊತೆಗೆ ಚೆಲ್ಲಾಟ ಆಡುವ ರೀತಿ ಚಾಲಕರು ವರ್ತಿಸುತ್ತಿದ್ದಾರೆ. ಟೈಮ್ ಕೀಪಿಂಗ್ ಹೆಸರಲ್ಲಿ ಬಸ್ಸುಗಳ ಧಾವಂತಕ್ಕೆ ರಸ್ತೆಯಲ್ಲಿರುವ ಇತರೇ ವಾಹನಗಳು ಸೈಡ್ ಬಿಟ್ಟು ಕೊಡಲೇಬೇಕಾದ ಸ್ಥಿತಿಗೆ ಬರುತ್ತವೆ. ಈ ಧಾವಂತದಿಂದಾಗಿಯೇ ಈ ಅಪಘಾತ ಆಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.





