ದುಬೈ: ದುಬೈನಲ್ಲಿ 31 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ವಿಶ್ವದ ಅತಿದೊಡ್ಡ ವಾರ್ಷಿಕ ಆಹಾರ ಮತ್ತು ಪಾನೀಯ ಸೋರ್ಸಿಂಗ್ ಕಾರ್ಯಕ್ರಮ ‘ಗಲ್ಫುಡ್ 2026’ ಮೇಳ ಜರುಗಿತು. ಜನವರಿ 26 ರಂದು ಉದ್ಘಾಟನೆಗೊಂಡ ಈ ಮೇಳದಲ್ಲಿ ದೇಶ, ವಿದೇಶಗಳ ಪ್ರತಿಷ್ಠಿತ ಕಂಪನಿಗಳು, ಬ್ರ್ಯಾಂಡ್ಗಳು ಪಾಲ್ಗೊಂಡಿದ್ದರು. ಅದರಲ್ಲಿ ಕರ್ನಾಟಕದ ಹೆಮ್ಮೆಯ ‘ಕರ್ನಾಟಕ ಮಿಲ್ಕ್ ಫೆಡೇರಷನ್’ ಬ್ರ್ಯಾಂಡ್ ಆದ ನಂದಿನಿ ಮಳಿಗೆ ಸಹ ತೆರೆಯಲಾಗಿತ್ತು.
ಈ ವಿಶ್ವ ಪ್ರಸಿದ್ಧ ಮೇಳವು 280,000 ಚದರ ಮೀಟರ್ಗಿಂತಲೂ ಹೆಚ್ಚು ಜಾಗದಲ್ಲಿ ವಿಸ್ತರಿಸಿಕೊಂಡಿತ್ತು. ನಗರದ ಎರಡೂ ತುದಿಗಳನ್ನು ಬಳಸಿಕೊಳ್ಳುವ ಮೂಲಕ, ಗಲ್ಫುಡ್ ಆಹಾರ ಮೇಳವು 195 ದೇಶಗಳಿಂದ ಅಭೂತಪೂರ್ವ 8,500ಕ್ಕೂ ಅಧಿಕ ಪ್ರದರ್ಶಕರಿಗೆ ಅವಕಾಶ ನೀಡಿದೆ. 1.5 ಮಿಲಿಯನ್ ಉತ್ಪನ್ನಗಳನ್ನು ಪ್ರದರ್ಶನಗೊಂಡವು. ಇದು ಕೇವಲ ದೊಡ್ಡ ಪ್ರದರ್ಶನವಲ್ಲ, ದುಬೈ ಅನ್ನು ಆಹಾರ ವ್ಯಾಪಾರದ “ಜಾಗತಿಕ ಪ್ರಧಾನ ಕಚೇರಿ”ಯಾಗಿ ತೋರ್ಪಡಿಸುವ ಕಾರ್ಯತಂತ್ರದ ಭಾಗವಾಗಿತ್ತು.
ಇಂತಹ ದುಬೈ ಗಲ್ಫ್ ಫುಡ್ ಫೆರ್ ಕಾರ್ಯಕ್ರಮದಲ್ಲಿ ಕರ್ನಾಟಕದ ಕೆಎಂಎಫ್ ವತಿಯಿಂದ ತೆರೆಯಲಾದ ನಂದಿನಿ ಪ್ರದರ್ಶನ ಮಳಿಗೆಗೆ ಅಮೂಲ್ ಅಧ್ಯಕ್ಷರಾದ ಅಶೋಕಭಾಯಿ ಚೌಧರಿ ಅವರು ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ಕೆಎಂಎಫ್ ಎಂಡಿ ಶಿವಸ್ವಾಮಿ ಹಾಗೂ ಮಾರುಕಟ್ಟೆ ನಿರ್ದೇಶಕ ಸತೀಶ್ ಮತ್ತು ಅಮುಲ್ ನ ಇತರ ಅಧಿಕಾರಿಗಳು ಈ ಪ್ರದರ್ಶನಕ್ಕೆ ಸಾಕ್ಷಿಯಾದರು. ಡಿಡಬ್ಲುಟಿಸಿ ಗಲ್ಫುಡ್ನ ಪ್ರಮುಖ ವಲಯಗಳಾಗಿ ‘ಎಕ್ಸ್ಪೋ ಸಿಟಿ ದುಬೈ ವರ್ಲ್ಡ್ ಫುಡ್, ಅಕ್ಕಿ, ದ್ವಿದಳ ಧಾನ್ಯಗಳು ಮತ್ತು ಧಾನ್ಯಗಳು, ಗಲ್ಫುಡ್ ಫ್ರೆಶ್, ಗಲ್ಫುಡ್ ಲಾಜಿಸ್ಟಿಕ್ಸ್ ಮತ್ತು ಗಲ್ಫುಡ್ ದಿನಸಿ ವ್ಯಾಪಾರ’ ಸೇರಿದಂತೆ ವಿಸ್ತೃತ ಮತ್ತು ಹೊಸ ಹೊಸ ಪ್ರದರ್ಶನಗಳನ್ನು ಸಾರ್ವಜನಿಕರು ಕಣ್ತುಂಬಿಕೊಂಡರು. ಈ ವಿಭಾಗವು ದುಬೈ ವಿಶ್ವದ ಅತಿದೊಡ್ಡ ಆಹಾರ ಸೋರ್ಸಿಂಗ್ ವೇದಿಕೆಯಾಗಿದೆ. ನೋಡುಗರಿಗೆ ಹೊಸ ಅನುಭವ ಒದಗಿಸಿಕೊಟ್ಟಿದೆ.






