ಯುಗಾದಿ ಹಬ್ಬದ ಹೊತ್ತಲ್ಲೇ ನಂದಿನಿ ಉತ್ಪನ್ನಗಳಿಗೂ ಗ್ಯಾಸ್ ಸಂಕಷ್ಟ ಎದುರಾಗಿದೆ. ಇರಾನ್-ಇಸ್ರೇಲ್ ಯುದ್ಧದ ಎಫೆಕ್ಟ್ನಿಂದ ಕೆಎಂಎಫ್ಗೆ ಕಮರ್ಷಿಯಲ್ ಸಿಲಿಂಡರ್ ಕೊರತೆ ಎದುರಾಗಿದ್ದು, ಇನ್ನೆರಡು ದಿನಗಳಲ್ಲಿ ಹಾಲಿನ ಉತ್ಪನ್ನಗಳ ತಯಾರಿಕೆ ಸ್ಥಗಿತಗೊಳ್ಳುವ ಭೀತಿ ಆವರಿಸಿದೆ.
ಬೆಂಗಳೂರು, ಮಾ.19: ಯುಗಾದಿ ಹಬ್ಬದ ಸಮಯದಲ್ಲೇ ಕನ್ನಡಿಗರ ಹೆಮ್ಮೆಯ ಬ್ರ್ಯಾಂಡ್ ಆಗಿರುವ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತಕ್ಕೂ ಸಂಕಷ್ಟ ಎದುರಾಗಿದೆ. ಇರಾನ್-ಇಸ್ರೇಲ್ ಸೇನಾ ಸಂಘರ್ಷದ ಪರಿಣಾಮವಾಗಿ ದೇಶಾದ್ಯಂತ ಉಂಟಾಗಿರುವ ಕಮರ್ಷಿಯಲ್ ಎಲ್ಪಿಜಿ ಸಿಲಿಂಡರ್ ಕೊರತೆಯ ಪರಿಣಾಮ ಇದೀಗ ನಂದಿನಿ ಉತ್ಪನ್ನಗಳ ಮೇಲೂ ತಟ್ಟತೊಡಗಿದೆ. ಕಳೆದ ಕೆಲ ದಿನಗಳಿಂದ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ಗಳ ಸರಬರಾಜು ವ್ಯತ್ಯಯಗೊಂಡಿರುವುದರಿಂದ ಕೆಎಂಎಫ್ ಉತ್ಪಾದನಾ ಘಟಕಗಳು ಒತ್ತಡಕ್ಕೆ ಸಿಲುಕಿವೆ.
ಉತ್ಪನ್ನಗಳ ತಯಾರಿಗೆ ಕೆಎಂಎಫ್ ಸಾಮಾನ್ಯವಾಗಿ ಪ್ರತಿ ತಿಂಗಳು ಸುಮಾರು 450 ಕಮರ್ಷಿಯಲ್ ಎಲ್ಪಿಜಿ ಸಿಲಿಂಡರ್ಗಳನ್ನು ಬಳಸುತ್ತದೆ. ಇತ್ತೀಚೆಗೆ ಅಗತ್ಯ ಪ್ರಮಾಣದಲ್ಲಿ ಸಿಲಿಂಡರ್ಗಳು ಲಭ್ಯವಾಗುತ್ತಿಲ್ಲ.
ಸದ್ಯ ಲಭ್ಯವಿರುವ ಗ್ಯಾಸ್ ಸಂಗ್ರಹವು ಇನ್ನೆರಡು ದಿನಗಳಿಗೆ ಮಾತ್ರ ಸಾಕಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾರ್ಚ್ 20ರ ಒಳಗೆ ಕಮರ್ಷಿಯಲ್ ಎಲ್ಪಿಜಿ ಪೂರೈಕೆ ಆಗದಿದ್ದರೆ, ನಂದಿನಿ ಬ್ರ್ಯಾಂಡ್ನ ಸಿಹಿ, ಖಾರದ ತಿಂಡಿ ಸೇರಿದಂತೆ ಹಲವು ಉತ್ಪನ್ನಗಳ ತಯಾರಿಕೆ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ.





