ನ್ಯಾಯಬೆಲೆ ಅಂಗಡಿಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು

 

ಚಿತ್ರದುರ್ಗ ಡಿ. 30 (ಕರ್ನಾಟಕ ವಾರ್ತೆ) :
ಚಿತ್ರದುರ್ಗ ನಗರದ ವಿವಿಧ ನ್ಯಾಯಬೆಲೆ ಅಂಗಡಿಗಳಿಗೆ ಶುಕ್ರವಾರ ಬೆಳ್ಳಂಬೆಳಿಗ್ಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು, ಪಡಿತರದಾರರ ಕುಂದುಕೊರತೆಗಳನ್ನು ಆಲಿಸಿದರು.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಸಾರ್ವಜನಿಕ ವಿತರಣಾ ಪದ್ಧತಿ ಮುಖಾಂತರ ದೇಶದ 5.3 ಲಕ್ಷ ನ್ಯಾಯಬೆಲೆ ಅಂಗಡಿಗಳ ಮೂಲಕ 80 ಕೋಟಿ ಫಲಾನುಭವಿಗಳಿಗೆ ಸಹಾಯಧನದಡಿ ಆಹಾರಧಾನ್ಯ ಸರಬರಾಜು ಮಾಡಲಾಗುತ್ತಿದೆ.  ಕೇಂದ್ರ ಸರ್ಕಾರ ಆಜಾದಿ ಕಾ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ದೇಶದಾದ್ಯಂತ 5000 ನ್ಯಾಯಬೆಲೆ ಅಂಗಡಿಗಳಿಗೆ ಉನ್ನತ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಬೇಕು,  ಒಂದು ರಾಷ್ಟ್ರ- ಒಂದು ಪಡಿತರ ಚೀಟಿ ಯೋಜನೆ ಕುರಿತಂತೆ ವರದಿ ಸಂಗ್ರಹಿಸಬೇಕು, ಅಲ್ಲದೆ ಈ ಸಂದರ್ಭದಲ್ಲಿ ನ್ಯಾಯಬೆಲೆ ಅಂಗಡಿಗಳ ತಪಾಸಣೆ ಮತ್ತು ಪಡಿತರದಾರರ ಕುಂದುಕೊರತೆಗಳನ್ನು ಆಲಿಸಿ, ವರದಿ ಸಲ್ಲಿಸುವಂತೆ ಸರ್ಕಾರ ಸೂಚನೆ ನೀಡಿದ್ದು, ಇದರನ್ವಯ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ಶುಕ್ರವಾರದಂದು ಬೆಳಿಗ್ಗೆಯೇ ನಗರದ ಬುರುಜನಹಟ್ಟಿ ಡಿವಿಟಿ ನ್ಯಾಯಬೆಲೆ ಅಂಗಡಿ ಹಾಗೂ ಟೌನ್ ಕೋಆಪರೇಟಿವ್ ಸೊಸೈಟಿಯ ನ್ಯಾಯಬೆಲೆ ಅಂಗಡಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.  ಕೇಂದ್ರ ಸರ್ಕಾರ ಘೋಷಿಸಿರುವ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಪಡಿತರದಾರರಿಗೆ ಉಚಿತವಾಗಿ ಅಕ್ಕಿಯನ್ನು ವಿತರಿಸಲಾಗುತ್ತಿದೆ.  ಹೀಗಾಗಿ ಪಡಿತರದಾರರಿಗೆ ಅಧಿಕಾರಿಗಳು ನೇರ ಭೇಟಿ ನೀಡಿ, ಅವರ ಕುಂದುಕೊರತೆ, ಅಹವಾಲುಗಳು ಮತ್ತು ಸಲಹೆಗಳನ್ನು ಆಲಿಸಿದಲ್ಲಿ, ಪಡಿತರ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಹಾಗೂ ಸುಧಾರಿತ ಕ್ರಮದಲ್ಲಿ ಬಲಪಡಿಸಬಹುದಾಗಿದೆ ಎಂಬುದು ಸರ್ಕಾರದ ಉದ್ದೇಶವಾಗಿದೆ.  ಜಿಲ್ಲಾಧಿಕಾರಿಗಳು ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ತೂಕದ ಯಂತ್ರದ ನಿಖರತೆ, ವಿತರಿಸಲಾಗುತ್ತಿರುವ ಆಹಾರ ಧಾನ್ಯದ ಪ್ರಮಾಣ, ಬಯೋಮೆಟ್ರಿಕ್ ವ್ಯವಸ್ಥೆ ಕುರಿತು ಪರಿಶೀಲಿಸಿದರು, ಅಲ್ಲದೆ ಆಯಾ ನ್ಯಾಯಬೆಲೆ ಅಂಗಡಿಯವರು ಆನ್‍ಲೈನ್‍ನಲ್ಲಿ ನಮೂದಿಸಿರುವ ದಾಸ್ತಾನು ಪ್ರಮಾಣ ಹಾಗೂ ಅಂಗಡಿಯಲ್ಲಿ ಭೌತಿಕವಾಗಿ ಲಭ್ಯವಿರುವ ದಾಸ್ತಾನು ಪ್ರಮಾಣವನ್ನು ಕೂಡ ಪರಿಶೀಲಿಸಿದರು.
ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪಡೆಯಲು ಆಗಮಿಸಿ, ಸರತಿ ಸಾಲಿನಲ್ಲಿ ನಿಂತಿದ್ದ ಪಡಿತರ ಚೀಟಿದಾರರೊಂದಿಗೆ ಜಿಲ್ಲಾಧಿಕಾರಿಗಳು ಮಾತನಾಡಿದರು.  ಕೆಲವು ಪಡಿತರ ಚೀಟಿದಾರರು ಈ ಸಂದರ್ಭದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ಸದ್ಯ ಯೋಜನೆಯಡಿ ನಮಗೆ ಅಕ್ಕಿಯನ್ನು ಮಾತ್ರ ಪೂರೈಸಲಾಗುತ್ತಿದೆ,  ಅಕ್ಕಿಯ ಜೊತೆಗೆ ಗೋಧಿ ಮತ್ತು ರಾಗಿ ಮುಂತಾದ ಪೂರಕ ಆಹಾರಧಾನ್ಯವನ್ನು ಕೂಡ ಪಡಿತರ ವ್ಯವಸ್ಥೆಯಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ನಿರಂತರ ವಿತರಣೆ ಆಗುವಂತಾಗಬೇಕು ಎಂದು ಮನವಿ ಸಲ್ಲಿಸಿದರು.  ಜಿಲ್ಲಾಧಿಕಾರಿಗಳು, ಅಹವಾಲು ಆಲಿಸಿ, ತಮ್ಮ ಕೋರಿಕೆಯ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು  ತಿಳಿಸಿದರು.  ಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ಇದೇ ರೀತಿ ವಿವಿಧೆಡೆ ನ್ಯಾಯಬೆಲೆ ಅಂಗಡಿಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ಹಾಗೂ ತಪಾಸಣೆ ನಡೆಸಲಾಗುವುದು ಎಂದು ತಿಳಿಸಿದ ಜಿಲ್ಲಾಧಿಕಾರಿಗಳು, ಪಡಿತರ ಚೀಟಿದಾರರ ಕುಂದುಕೊರತೆ ಹಾಗೂ ಅಹವಾಲುಗಳನ್ನು ಸ್ವೀಕರಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿನಿರ್ದೇಶಕ ಮಧುಸೂಧನ್, ಆಹಾರ ನಿರೀಕ್ಷಕ ತಿಪ್ಪೇಶಪ್ಪ ಸೇರಿದಂತೆ ಆಯಾ ನ್ಯಾಯಬೆಲೆ ಅಂಗಡಿಗಳ ಮಾಲೀಕರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿನಿರ್ದೇಶಕ ಮಧುಸೂಧನ್, ಆಹಾರ ನಿರೀಕ್ಷಕ ತಿಪ್ಪೇಶಪ್ಪ ಸೇರಿದಂತೆ ಆಯಾ ನ್ಯಾಯಬೆಲೆ ಅಂಗಡಿಗಳ ಮಾಲೀಕರು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours