ಎಬಿಪಿ-ಸಿವೋಟರ್‌ ಸಮೀಕ್ಷೆಯಲ್ಲಿ ಕಾಂಗ್ರೆಸ್, ಜೀ ಸಮೀಕ್ಷೆಯಲ್ಲಿ ಬಿಜೆಪಿ ಮುನ್ನಡೆ ಯಾರಿಗೆ ಎಷ್ಟು ಸ್ಥಾನ

 

ನವದೆಹಲಿ/ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆ, ದಕ್ಷಿಣ ಭಾರತದಲ್ಲಿ ಬಿಜೆಪಿ ಪ್ರಾಬಲ್ಯ, ರಾಹುಲ್‌ ಗಾಂಧಿ ಅನರ್ಹತೆ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ ಎಂಬುದು ಸೇರಿ ಹಲವು ದೃಷ್ಟಿಯಿಂದ ಪ್ರಾಮುಖ್ಯತೆ ಪಡೆದಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Elections 2023) ದಿನಾಂಕ ನಿಗದಿಯಾಗಿದೆ.

ಮೇ 10ರಂದು ಚುನಾವಣೆ ನಡೆಯಲಿದ್ದು, 13ಕ್ಕೆ ಫಲಿತಾಂಶ ಪ್ರಕಟವಾಗಿದೆ. ಇದರ ಬೆನ್ನಲ್ಲೇ, ಕರ್ನಾಟಕ ವಿಧಾನಸಭೆ ಚುನಾವಣೆ ಕುರಿತು ಎಬಿಪಿ-ಸಿವೋಟರ್‌ ಹಾಗೂ ಜೀ ನ್ಯೂಸ್‌-ಮ್ಯಾಟ್ರಿಜ್‌ ಚುನಾವಣೆಪೂರ್ವ ಸಮೀಕ್ಷೆ ನಡೆಸಿವೆ.

ಎಬಿಪಿ-ಸಿವೋಟರ್‌ ವರದಿ ಇರುವುದಿಷ್ಟು 

ಕರ್ನಾಟಕ ವಿಧಾನಸಭೆ ಚುನಾವಣೆ ಕುರಿತು ಎಬಿಪಿ-ಸಿವೋಟರ್‌ ಸಂಗ್ರಹಿಸಿದ ಜನಾಭಿಪ್ರಾಯದ ಪ್ರಕಾರ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ. ಜನಾಭಿಪ್ರಾಯದ ಪ್ರಕಾರ ಕಾಂಗ್ರೆಸ್‌ 115-127 ಸೀಟುಗಳನ್ನು ಪಡೆದು ನಿಚ್ಚಳ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಲಿದೆ. ಇನ್ನು ಬಿಜೆಪಿಗೆ 68-80 ಸೀಟು ಹಾಗೂ ಜೆಡಿಎಸ್‌ಗೆ 23-35 ಸೀಟುಗಳು ಮಾತ್ರ ಲಭ್ಯವಾಗಲಿವೆ ಎಂದು ತಿಳಿದುಬಂದಿದೆ.

ಕಲ್ಯಾಣ ಕರ್ನಾಟಕದಲ್ಲಿ ಕೈ-ಕಮಲ ಪೈಪೋಟಿ

ಬಿಜೆಪಿಗೆ ಹೆಚ್ಚು ವರದಾನವಾಗಿರುವ ಕಲ್ಯಾಣ ಕರ್ನಾಟಕ ಭಾಗದಲ್ಲಿ ಈ ಬಾರಿ ಕಾಂಗ್ರೆಸ್‌ ಹಾಗೂ ಬಿಜೆಪಿ ಮಧ್ಯ ತೀವ್ರ ಪೈಪೋಟಿ ಇದೆ ಎಂದು ಸಮೀಕ್ಷೆ ತಿಳಿಸಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್‌ ಶೇ.44ರಷ್ಟು ಮತಗಳನ್ನು ಪಡೆದರೆ, ಬಿಜೆಪಿಯು ಶೇ.37ರಷ್ಟು ಮತಗಳನ್ನು ಪಡೆಯಲಿದೆ. ಕಾಂಗ್ರೆಸ್‌ 19-23 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದರೆ, ಬಿಜೆಪಿ 8-12 ಸೀಟುಗಳನ್ನು ತನ್ನದಾಗಿಸಿಕೊಳ್ಳಲಿದೆ ಎಂದು ಉಲ್ಲೇಖಿಸಲಾಗಿದೆ. ಇದು ಬಿಜೆಪಿಗೆ ಹಿನ್ನಡೆ ಎಂದೇ ಹೇಳಲಾಗುತ್ತಿದೆ.

ಲಿಂಗಾಯತರ ಪ್ರಾಬಲ್ಯದ ಕ್ಷೇತ್ರದಲ್ಲೂ ಕಾಂಗ್ರೆಸ್‌ಗೆ ಜಯ

ಎಬಿಪಿ-ಸಿವೋಟರ್‌ ಸಮೀಕ್ಷೆ ಪ್ರಕಾರ, ಮುಂಬೈ ಕರ್ನಾಟಕದಲ್ಲೂ ಕಾಂಗ್ರೆಸ್‌ಗೆ ಹೆಚ್ಚಿನ ಕ್ಷೇತ್ರಗಳು ಲಭಿಸಲಿವೆ. ಲಿಂಗಾಯತರೇ ಪ್ರಬಲವಾಗಿರುವ, ಬಿಜೆಪಿಗೆ ಹೆಚ್ಚಿನ ಬೆಂಬಲ ಇರುವ ಮುಂಬೈ ಕರ್ನಾಟಕ ಭಾಗದಲ್ಲಿ ಈ ಬಾರಿ ಕಾಂಗ್ರೆಸ್‌ 25-29 ಹಾಗೂ ಬಿಜೆಪಿ 21-25 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಆದರೆ, ಕರಾವಳಿ ಭಾಗದಲ್ಲಿ ಬಿಜೆಪಿ ಮುನ್ನಡೆ ಸಾಧಿಸಲಿದ್ದು, 9-13 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಲಿದೆ. ಇನ್ನು ಕಾಂಗ್ರೆಸ್‌ 8-12 ಸ್ಥಾನಗಳನ್ನು ತನ್ನದಾಗಿಸಿಕೊಳ್ಳಲಿದೆ ಎಂದು ಸಮೀಕ್ಷೆ ತಿಳಿಸಿದೆ. ಆದಾಗ್ಯೂ, ಕೇಂದ್ರ ಕರ್ನಾಟಕದಲ್ಲೂ ಕಾಂಗ್ರೆಸ್‌ (18-22) ಪ್ರಾಬಲ್ಯ ಸಾಧಿಸುವ ಲಕ್ಷಣ ಇರುವುದರಿಂದ ಬಿಜೆಪಿಗೆ ತೀವ್ರ ಹಿನ್ನಡೆಯಾಗಲಿದೆ. ಬಿಜೆಪಿಯು ಈ ಭಾಗದಲ್ಲಿ 12-16 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ವರದಿ ತಿಳಿಸಿದೆ.

ಜೀ ನ್ಯೂಸ್‌-ಮ್ಯಾಟ್ರಿಜ್‌ ವರದಿ ತಿಳಿಸುವುದೇನು?

ಜೀ ನ್ಯೂಸ್-ಮ್ಯಾಟ್ರಿಜ್‌ ಜನಾಭಿಪ್ರಾಯ ಸಂಗ್ರಹ ವರದಿ ಪ್ರಕಾರ, ಬಿಜೆಪಿಯೇ ಈ ಬಾರಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ತಿಳಿಸಿದೆ. ಬಿಜೆಪಿಯು ಚುನಾವಣೆಯಲ್ಲಿ 96-106, ಕಾಂಗ್ರೆಸ್‌ 88-98 ಹಾಗೂ ಜೆಡಿಎಸ್‌ 23-33 ಹಾಗೂ ಪಕ್ಷೇತರ ಅಥವಾ ಇತರೆ 02-07 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ತಿಳಿಸಿದೆ. ಸಮೀಕ್ಷೆಗಾಗಿ ಸಂಸ್ಥೆಗಳು 56 ಸಾವಿರ ಜನರನ್ನು ಸಂಪರ್ಕಿಸಿವೆ ಎಂದು ತಿಳಿದುಬಂದಿದೆ.

 

ಬಿಎಸ್‌ವೈ ಬದಲಾವಣೆ ಬೀರುವ ಪ್ರಭಾವವೇನು?

ಬಿ.ಎಸ್‌.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ, ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಮಾಡಿದ್ದು ಬಿಜೆಪಿಗೆ ಅನುಕೂಲವಾಗುತ್ತದೆಯೇ ಎಂಬುದು ಸೇರಿ ಹಲವು ಪ್ರಶ್ನೆ ಕೇಳಲಾಗಿತ್ತು. ಇವುಗಳಲ್ಲಿ ಬಿಎಸ್‌ವೈ ಕುರಿತು ಕೇಳಿದ ಪ್ರಶ್ನೆಗೆ, ಶೇ.31ರಷ್ಟು ಜನ ಬಿಜೆಪಿಗೆ ಅನುಕೂಲವಾಗಲಿದೆ ಎಂದರೆ, ಶೇ.21ರಷ್ಟು ಮಂದಿ ಅನನುಕೂಲ ಆಗಲಿದೆ ಎಂದು ಹೇಳಿದ್ದಾರೆ.

ಮೋದಿ ಗೇಮ್‌ಚೇಂಜರ್‌ ಆಗುವರೇ?

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗೇಮ್‌ಚೇಂಜರ್‌ ಆಗುವರೇ ಎಂಬ ಪ್ರಶ್ನೆಗೆ ಶೇ.31ರಷ್ಟು ನಾಗರಿಕರು ಹೌದು ಎಂದರೆ, ಶೇ.32ರಷ್ಟು ಮಂದಿ ಆಗುವುದಿಲ್ಲ ಎಂದಿದ್ದಾರೆ. ಇನ್ನು, ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು ಕಿಂಗ್‌ ಮೇಕರ್‌ ಆಗುವರೇ ಎಂಬ ಪ್ರಶ್ನೆಗೆ, ಶೇ.30ರಷ್ಟು ಜನ ಹೌದು ಹಾಗೂ ಶೇ.26ರಷ್ಟು ಮಂದಿ ಇಲ್ಲ ಎಂದಿದ್ದಾರೆ.

ಹಾಗೆಯೇ, ಕೇಂದ್ರದ ಯೋಜನೆಗಳು ಕರ್ನಾಟಕದ ಜನತೆಗೆ ತೃಪ್ತಿ ತಂದಿವೆಯೇ ಎಂಬ ಪ್ರಶ್ನೆಗೆ ಶೇ.37ರಷ್ಟು ಮಂದಿ ಹೌದು ಎಂದು, ಶೇ.24ರಷ್ಟು ನಾಗರಿಕರು ಇಲ್ಲ ಎಂದು ಉತ್ತರಿಸಿದ್ದಾರೆ. ಇನ್ನು ಕೊನೆಯದಾಗಿ, ರಾಹುಲ್‌ ಗಾಂಧಿ ಅವರು ಕೈಗೊಂಡ ಭಾರತ್‌ ಜೋಡೋ ಯಾತ್ರೆಯು ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ನೆರವಾಗಲಿದೆ ಎಂಬ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಶೇ.22ರಷ್ಟು ಜನ ಹೌದು ಎಂದಿದ್ದಾರೆ. ಹಾಗೆಯೇ, ಶೇ.41ರಷ್ಟು ಮಂದಿ ನೆರವಾಗುವುದಿಲ್ಲ ಎಂದು ಉತ್ತರಿಸಿದ್ದಾರೆ.

The post Karnataka Elections 2023: ಚುನಾವಣೆ ಪೂರ್ವ ಸಮೀಕ್ಷೆ: ಎಬಿಪಿ ಪ್ರಕಾರ ಕಾಂಗ್ರೆಸ್‌, ಜೀ ನ್ಯೂಸ್‌ ಪ್ರಕಾರ ಬಿಜೆಪಿ ಮುನ್ನಡೆ ಸಾಧಿಸಿದೆ.

[t4b-ticker]

You May Also Like

More From Author

+ There are no comments

Add yours