ನವದೆಹಲಿ, ಡಿ. 31: ಕೇವಲ ಒಂದು ತಿಂಗಳ ಹಿಂದೆ ವಿಮಾನಯಾನ ವಿಳಂಬದಿಂದ ದೇಶಾದ್ಯಂತ ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾಗಿದ್ದ ಇಂಡಿಗೋ ಏರ್ಲೈನ್ಸ್ಗೆ ಇದೀಗ ಕೇಂದ್ರ ಸರ್ಕಾರ ಭಾರೀ ಶಾಕ್ ನೀಡಿದೆ. ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾಗಿರುವ ಇಂಡಿಗೋಗೆ 458 ಕೋಟಿ ರೂ.ಗಳಿಗೂ ಅಧಿಕ ಜಿಎಸ್ಟಿ ನೋಟಿಸ್ ಜಾರಿ ಮಾಡಲಾಗಿದೆ. ಈ ಬಗ್ಗೆ ಇಂಡಿಗೋ ಮಂಗಳವಾರ ಅಧಿಕೃತವಾಗಿ ಮಾಹಿತಿ ನೀಡಿದ್ದು, ತೆರಿಗೆ ಅಧಿಕಾರಿಗಳ ಆದೇಶವನ್ನು ಪ್ರಶ್ನಿಸುವುದಾಗಿ ಘೋಷಿಸಿದೆ.
ಸಿಜಿಎಸ್ಟಿ ದೆಹಲಿ ದಕ್ಷಿಣ ಆಯುಕ್ತರ ಕಚೇರಿಯ ಹೆಚ್ಚುವರಿ ಆಯುಕ್ತರು ಈ ದಂಡ ವಿಧಿಸಿದ್ದಾರೆ. ನಿಯಂತ್ರಕ ಫೈಲಿಂಗ್ ಪ್ರಕಾರ, ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ (CGST Act), 2017ರ ಸೆಕ್ಷನ್ 74ರ ಅಡಿಯಲ್ಲಿ ಈ ಆದೇಶ ಹೊರಡಿಸಲಾಗಿದೆ. ಇದು 2018-19 ರಿಂದ 2022-23 ಹಣಕಾಸು ವರ್ಷಗಳ ಅವಧಿಗೆ ಸಂಬಂಧಿಸಿದ ಮೌಲ್ಯಮಾಪನದ ಭಾಗವಾಗಿದ್ದು, ಒಟ್ಟು ಜಿಎಸ್ಟಿ ಬೇಡಿಕೆ ಮತ್ತು ದಂಡದ ಮೊತ್ತ 458,26,16,980 ರೂ. ಆಗಿದೆ.
ಈ ಆದೇಶವನ್ನು ಪ್ರಶ್ನಿಸುವುದಾಗಿ ಇಂಡಿಗೋ ತಿಳಿಸಿದ್ದು, ಸೂಕ್ತ ಕಾನೂನು ಪರಿಹಾರಗಳಿಗಾಗಿ ಮುಂದಾಗುವುದಾಗಿ ಹೇಳಿದೆ.






