ಮೂಡುಬಿದಿರೆ: ತುಳುನಾಡಿನ ಜನಪದ ಕ್ರೀಡೆಯ ಪ್ರತಿಷ್ಠಿತ ವೇದಿಕೆಯಾದ 23ನೇ ವರ್ಷದ ಕೋಟಿ-ಚೆನ್ನಯ ಜೋಡುಕರೆ ಕಂಬಳ ಕೂಟ ಶನಿವಾರ ಹಾಗೂ ಭಾನುವಾರ ಭಾರೀ ಜನಸಾಗರದ ನಡುವೆ ನಡೆಯಿತು. ಈ ಬಾರಿ ದಾಖಲೆಯ 236 ಜೋಡಿ ಕೋಣಗಳು ವಿವಿಧ ವಿಭಾಗಗಳಲ್ಲಿ ಪಾಲ್ಗೊಂಡು ಕಂಬಳ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿವೆ.
ಹೊನಲು ಬೆಳಕಿನ ನಡುವೆ ನಡೆದ ಕಂಬಳ ಓಟದಲ್ಲಿ ಹಿರಿಯ-ಕಿರಿಯ ವಿಭಾಗಗಳಲ್ಲಿ ತೀವ್ರ ಸ್ಪರ್ಧೆ ಕಂಡುಬಂದಿತು. ಕೂಟದಲ್ಲಿ ಕನೆಹಲಗೆ 11. ಅಡ್ಡಹಲಗೆ 9. ಹಗ್ಗ ಹಿರಿಯ 19, ನೇಗಿಲು ಹಿರಿಯ 36. ಹಗ್ಗ ಕಿರಿಯ 39 ಹಾಗೂ ನೇಗಿಲು ಕಿರಿಯ ವಿಭಾಗದಲ್ಲಿ 122 ಜೋಡಿ ಕೋಣಗಳು ಸ್ಪರ್ಧೆ ನಡೆಸಿದವು. ಒಟ್ಟಾರೆ 236 ಜೋಡಿ ಕೋಣೆಗಳ ಭಾಗವಹಿಸುವಿಕೆಯಿಂದ ಈ ವರ್ಷದ ಕೂಟ ವಿಶೇಷ ಗಮನಸೆಳೆಯಿತು.
ಅಡ್ಡಹಲಗೆ ವಿಭಾಗದಲ್ಲಿ ನಾರ್ಯ ಗುತ್ತು ಕುವೆತ್ತಬೈಲು ಸಂತೋಷ್ ರೈ (ಬೊಳ್ಳಾರು) ಪ್ರಥಮ ಸ್ಥಾನ ಪಡೆದರೆ, ಇರುವೈಲು ದೊಡ್ಡಗುತ್ತು ಜಗದೀಶ್ ಎಂ. ಶೆಟ್ಟಿ ದ್ವಿತೀಯ ಸ್ಥಾನ ಪಡೆದರು. ಹಗ್ಗ ಹಿರಿಯ ವಿಭಾಗದಲ್ಲಿ ಕೊಳಕೆ ಇರ್ವತ್ತೂರು ಭಾಸ್ಕರ ಎಸ್. ಕೋಟ್ಯಾನ್ ಪ್ರಥಮ ಸ್ಥಾನ, ಅತ್ತೂರು ಮನ್ಮಥ ಜೆ. ಶೆಟ್ಟಿ “ಬಿ” ದ್ವಿತೀಯ ಸ್ಥಾನ ಗಳಿಸಿದರು.
ಹಗ್ಗ ಕಿರಿಯ ವಿಭಾಗದಲ್ಲಿ ಬೆಳುವಾಯಿ ಪೆರೋಡಿ ಪುತ್ತಿಗೆ ಗುತ್ತು ಕೌಶಿಕ್ ದಿನಕರ ಬಿ. ಶೆಟ್ಟಿ “ಬಿ” ಪ್ರಥಮ, ಉಡುಪಿ ಕಕ್ಕುಂಜೆ ರಾಧಾ ನಿಲಯ ಸಂತೋಷ್ ಶಿವರಾಜ್ ಪೂಜಾರಿ “ಬಿ” ದ್ವಿತೀಯ ಸ್ಥಾನಕ್ಕೆ ಭಾಜನರಾದರು. ನೇಗಿಲು ಹಿರಿಯ ವಿಭಾಗದಲ್ಲಿ ತೊಡಾರು ಪಂಚಶಕ್ತಿ ಬಾರ್ದಿಲ ಶ್ಲೋಕ್ ರಂಜಿತ್ ಪೂಜಾರಿ ಪ್ರಥಮ ಸ್ಥಾನ ಪಡೆದು ಮಿಂಚಿದರೆ, ನೂಜಿಪ್ಪಾಡಿ ಡಾ. ಪ್ರವೀಣ್ ಹೊಳ್ಳ ದ್ವಿತೀಯ ಸ್ಥಾನ ಪಡೆದರು.
ನೇಗಿಲು ಕಿರಿಯ ವಿಭಾಗದಲ್ಲಿ ಮಿಯಾರ್ ಬೋರ್ಕಟ್ಟೆ ಮಿತ್ತೊಟ್ಟು ಪೃಥ್ವಿ ಪ್ರಾಪ್ತಿ ಸಂಧ್ಯಾ ಪ್ರಭಾಕರ ಶೆಟ್ಟಿ “ಎ” ಪ್ರಥಮ ಸ್ಥಾನ ಗಳಿಸಿದರೆ, ಎರ್ಮಾಳ್ ಪುಚೊಟ್ಟುಬೀಡು ಬಾಲಚಂದ್ರ ಲೋಕಯ್ಯ ಶೆಟ್ಟಿ “ಎ” ದ್ವಿತೀಯ ಸ್ಥಾನ ಪಡೆದರು.






