ಶ್ರದ್ಧಾಕೇಂದ್ರಗಳು ಅಭಿವೃದ್ಧಿಯ ಸಂಕೇತ: ದೇವೇಂದ್ರ ಹೆಗ್ಡೆ
ಮರೋಡಿ: ಶ್ರದ್ಧಾಕೇಂದ್ರಗಳು ಗ್ರಾಮದ ಅಭಿವೃದ್ಧಿಯ ಸಂಕೇತ. ಇವುಗಳು ಅಭಿವೃದ್ಧಿಯಾದರೆ ಊರು ಪ್ರಗತಿ ಸಾಧಿಸುವ ಜೊತೆಗೆ ಜನರಲ್ಲಿ ಧರ್ಮಪ್ರಜ್ಞೆ ಮೂಡುತ್ತದೆ ಎಂದು ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಆಡಳಿಕ ಮೊಕ್ತೇಸರ ದೇವೇಂದ್ರ ಹೆಗ್ಡೆ ಕೊಕ್ರಾಡಿ ಅಭಿಪ್ರಾಯಪಟ್ಟರು.
ಆಲಡೆ ಕ್ಷೇತ್ರ ಮರೋಡಿ ಕ್ಷೇತ್ರದಲ್ಲಿ ಆಯನ ಮತ್ತು ಸಿರಿಗಳ ಜಾತ್ರೆ ನಡೆಯುತ್ತಿದ್ದು, ಈ ಪ್ರಯುಕ್ತ ಮಂಗಳವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಆಶ್ರಯದಲ್ಲಿ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ಧಾರ್ಮಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಅಶೋಕ್ ಬಿ. ಮಾತನಾಡಿ, ಸಾಮೂಹಿಕ ಸತ್ಯನಾರಾಯಣ ಪೂಜೆಯು ವಿಭಿನ್ನ ಕಲ್ಪನೆಯಾಗಿದ್ದು, ಇದರಿಂದ ಜನರಲ್ಲಿ ಒಗ್ಗಟ್ಟು, ಸಹಬಾಳ್ವೆ ಹೆಚ್ಚುತ್ತಿದೆ. ಇಂಥಹ ಕಾರ್ಯಕ್ರಮಗಳು ಮಕ್ಕಳಲ್ಲಿ ಧಾರ್ಮಿಕ ಸಂಸ್ಕಾರ ಬೆಳೆಸಲು ಸಹಕಾರಿ ಎಂದು ಹೇಳಿದರು.
ಮರೋಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರತ್ನಾಕರ ಬುಣ್ಣಾನ್, ಶ್ರೀ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಕಾರ್ಯದರ್ಶಿ ಜಯಂತ ಕೋಟ್ಯಾನ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರ ಕಚೇರಿ ನಿರ್ದೇಶಕ ಪ್ರದೀಪ್, ನಾರಾವಿ ಕೇಂದ್ರ ವಲಯದ ಅಧ್ಯಕ್ಷ ಸದಾನಂದ ಬಂಗೇರ ಶುಭ ಹಾರೈಸಿದರು. ಪ್ರಗತಿಬಂಧು ಒಕ್ಕೂಟದ ಅಧ್ಯಕ್ಷರಾದ ರಾಜುಪೂಜಾರಿ ಬೋವುರಿ ಮತ್ತು ರಾಜುಪೂಜಾರಿ ಹಜಂಕಾನಿ ವೇದಿಕೆಯಲ್ಲಿದ್ದರು.
ಪೂಜಾ ಸಮಿತಿ ಅಧ್ಯಕ್ಷ ಶುಭರಾಜ್ ಹೆಗ್ಡೆ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಯಶೋಧರ ಬಂಗೇರ ಕಾರ್ಯಕ್ರಮ ನಿರೂಪಿಸಿದರು. ಯೋಜನೆಯ ವಲಯ ಮೇಲ್ವಿಚಾರಕಿ ವಿಶಾಲಾಕ್ಷಿ ವಂದಿಸಿದರು. ಸೇವಾಪ್ರತಿನಿಧಿಗಳಾದ ಹರಿಣಾಕ್ಷಿ, ಶಶಿಕಲಾ ಸಹಕರಿಸಿದರು. ವಿವಿಧ ಕ್ಷೇತ್ರದ ಸಾಧಕರನ್ನು, ದಾನಿಗಳನ್ನು, ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಮರೋಡಿ ಕ್ಷೇತ್ರದಲ್ಲಿ ವರ್ಷಾವಧಿ ಆಯನ–ಸಿರಿಗಳ ಜಾತ್ರೋತ್ಸವ ಸಂಭ್ರಮ
ಆಲಡೆ ಕ್ಷೇತ್ರ ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ ಆಲಡೆ ಕ್ಷೇತ್ರ ಮರೋಡಿಯಲ್ಲಿ ವರ್ಷಾವಧಿ ಆಯನ ಮತ್ತು ಸಿರಿಗಳ ಜಾತ್ರೆಯು ಭಾನುವಾರ ಆರಂಭಗೊಂಡಿದ್ದು, ವಿವಿಧ ಧಾರ್ಮಿಕ ವಿಧಿವಿಧಾನಗಳು ಕ್ಷೇತ್ರದ ತಂತ್ರಿಗಳಾದ ವೇದಮೂರ್ತಿ ಬಾಲಕೃಷ್ಣ ಪಾಂಗಣ್ಣಾರ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯುತ್ತಿದೆ.
ಭಾನುವಾರ ವಾಸ್ತುರಾಕ್ಷೋಘ್ನ ಹೋಮ, ಪ್ರಕಾರ ಬಲಿ, ಸೋಮವಾರ ಧ್ವಜಾರೋಹಣ, ಪ್ರಸಾದ ವಿತರಣೆ, ದೊಡ್ಡ ರಂಗಪೂಜೆ ವ್ಯಾಘ್ರಚಾಮುಂಡಿ ಸಹಿತ ರಕ್ಷೇಶ್ವರಿ, ಮೈಸಂದಾಯ ದೈವಗಳಿಗೆ ಸೇವೆ, ಸಾಂಸ್ಕೃತಿಕ ವೇದಿಕೆಯಲ್ಲಿ ಸ್ಥಳೀಯ ಪ್ರತಿಭೆಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮ, ಹಿರಿಯಡ್ಕ ಶ್ರೀ ವೀರಭದ್ರ ದಶಾವತಾರ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರದಿಂದ ಶ್ರೀ ಕ್ಷೇತ್ರ ಹಿರಿಯಡ್ಕ ಕ್ಷೇತ್ರ ಮಹಾತ್ಮೆ ಎಂಬ ಯಕ್ಷಗಾನ ಪ್ರದರ್ಶನ ನಡೆಯಿತು.
ಮಂಗಳವಾರ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭಾ ಕಾರ್ಯಕ್ರಮ, ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ ಆಶ್ಲೇಷ ಬಲಿ, ರಾತ್ರಿ ನಿತ್ಯವಿಧಿ ಕವಾಟ ಬಂಧನ, ಪಟ್ಟದಪಂಜುರ್ಲಿ ಮತ್ತು ಕಲ್ಕುಡ ದೈವಗಳ ಕೋಲ, ಕುಣಿತ ಭಜನೆ, ಸಾಂಸ್ಕೃತಿಕ ವೇದಿಕೆಯಲ್ಲಿ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಪ್ರಣತಿ ಮತ್ತು ಪ್ರದೇಶ್ ಜೋಷಿ ಇವರಿಂದ ಜಾದೂ ಪ್ರದರ್ಶನ ಜರುಗಿತು.
ಇಂದು ಸಿರಿಗಳ ಜಾತ್ರೆ: ಬುಧವಾರ ತುಲಾಭಾರ ಸೇವೆ ದರ್ಶನಬಲಿ ಹಾಗೂ ಮಹಾಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಬಲಿಉತ್ಸವ, ಸಿರಿಗಳ ಚಾತ್ರೆ, ಕುಮಾರ ದರ್ಶನ, ಕೊಡಮಣಿತ್ತಾಯ ದೈವದ ನೇಮೋತ್ಸವ, ದೈವದೇವರ ಭೇಟಿ, ಅವಧೃತ ಸ್ನಾನ, ಧ್ವಜಾವರೋಹಣ, ಮಹಾಪೂಜೆ ಕುಣಿತ ಭಜನಾ ಕಾರ್ಯಕ್ರಮ ಜರುಗಲಿದೆ.
ಸಾಂಸ್ಕೃತಿಕ ವೇದಿಕೆಯಲ್ಲಿ ವಿವಿಧ ಮನೋರಂಜನಾ ಕಾರ್ಯಕ್ರಮ, ವಾಗ್ಮಿ ಶ್ರೀಕಾಂತ್ ಶೆಟ್ಟಿ ಅವರಿಂದ ಧಾರ್ಮಿಕ ಪ್ರವಚನ, ವಿಜಯಕುಮಾರ್ ಕೊಡಿಯಾಲ್ ಬೈಲು ನಿರ್ದೇಶನದಲ್ಲಿ ಶುಭರಾಜ್ ರಾವ್ ಕಾವೂರುರವರ ಛತ್ರಪತಿ ಶಿವಾಜಿ ತುಳು ನಾಟಕ ಪ್ರದರ್ಶನವಿದೆ. ಗುರುವಾರ ಸಂಪ್ರೋಕ್ಷಣೆ, ಕಲಶಾಭಿಷೇಕ, ಮಂತ್ರಾಕ್ಷತೆಯೊಂದಿಗೆ ಜಾತ್ರೋತ್ಸವ ಸಂಪನ್ನಗೊಳ್ಳಲಿದೆ.
ಕ್ಷೇತ್ರದ ಆಡಳಿತ ಮೊಕ್ತೇಸರ ದೇವೇಂದ್ರ ಹೆಗ್ಡೆ ಕೊಕ್ರಾಡಿ, ಆಡಳಿತ ಮಂಡಳಿ ಕಾರ್ಯದರ್ಶಿ ಜಯಂತ ಕೋಟ್ಯಾನ್, ಪ್ರಧಾನ ಆರ್ಚಕ ಸುಬ್ರಹ್ಮಣ್ಯ ಭಟ್, ಜೀರ್ಣೋದ್ಧಾರ ಸಮಿತಿ ಮುಂಬೈ ಘಟಕದ ಅಧ್ಯಕ್ಷ ನಾರಾಯಣ ಸುವರ್ಣ, ಆಡಳಿತ ಸಮಿತಿಯ ಸದಸ್ಯರು, ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡರು.






