ಮೈಸೂರು ಜಿಲ್ಲೆಯ ನಾಗರಹೊಳೆ ಅರಣ್ಯ ಗಡಿಗಳಲ್ಲಿ ಹೆಚ್ಚಿದ ಕಾಡಾನೆ ಹಾವಳಿ ತಡೆಯಲು ಅರಣ್ಯ ಇಲಾಖೆ AI ಆಧಾರಿತ ಧ್ವನಿವರ್ಧಕ ಸಹಿತ ಕ್ಯಾಮರಾಗಳನ್ನು ಅಳವಡಿಸಿದೆ. ಈ ಕ್ಯಾಮರಾಗಳು ಆನೆಗಳನ್ನು 150 ಮೀ ದೂರದಿಂದ ಗುರುತಿಸಿ, ವಿಭಿನ್ನ ಶಬ್ದ ಮಾಡುವ ಮೂಲಕ ಓಡಿಸುತ್ತವೆ. ಈ ಪ್ರಯೋಗ ಯಶಸ್ವಿಯಾಗಿದ್ದು, ಇತರ ಅರಣ್ಯ ಪ್ರದೇಶಗಳ ಗಡಿಗಳಿಗೂ ವಿಸ್ತರಿಸಲು ಅರಣ್ಯ ಇಲಾಖೆ ಚಿಂತನೆ ನಡೆಸಿದೆ.
ಕಾಡಾನೆ ಕಾಣಿಸುತ್ತಿದ್ದಂತೆಯೇ ಮೊಳಗುತ್ತೆ ವಿಚಿತ್ರ ಸದ್ದು!
ಈ ಎಐ ಕ್ಯಾಮರಾಗಳಲ್ಲಿ 20ಕ್ಕೂ ಹೆಚ್ಚು ವಿಭಿನ್ನ ರೀತಿಯ ಶಬ್ದಗಳಿವೆ. ಜೇನು ನೊಣಗಳ ಗದ್ದಲ, ಪಟಾಕಿ ಸದ್ದು ಸೇರಿದಂತೆ ವಿವಿಧ ಶಬ್ದಗಳನ್ನು ಹೊರಡಿಸುವ ಮೂಲಕ ಕಾಡಾನೆಗಳನ್ನು ಭಯಪಡಿಸಿ ತೋಟ ಹಾಗೂ ಬೆಳೆ ಪ್ರದೇಶಗಳತ್ತ ಬರದಂತೆ ತಡೆಯಲಾಗುತ್ತಿದೆ. ತೋಟದ ಕಾವಲುಗಾರನಂತೆ ಕೆಲಸ ಮಾಡುವ ಈ ಕ್ಯಾಮರಾಗಳು ಕಾಡಾನೆ ಕಣ್ಣಿಗೆ ಬಿದ್ದೊಡನೆ ತಕ್ಷಣ ಸಕ್ರಿಯಗೊಳ್ಳುತ್ತವೆ.
ಎಐ ಕ್ಯಾಮರಾ ಅಳವಡಿಕೆ ಬಳಿಕ ತಗ್ಗಿದ ಕಾಡಾನೆ ಹಾವಳಿ
ಎಐ ಕ್ಯಾಮರಾ ಅಳವಡಿಕೆಯ ಬಳಿಕ ಕಾಡಾನೆಗಳ ಹಾವಳಿ ಗಣನೀಯವಾಗಿ ತಗ್ಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ. ಬೆಳೆ ನಾಶವನ್ನು ತಡೆಯುವಲ್ಲಿ ಈ ‘ಕೂಗು ಕ್ಯಾಮರಾ’ಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿವೆ. ಕಾಡಾನೆಗಳು ಓಡುವ ದೃಶ್ಯಗಳು ಸಿಸಿ ಕ್ಯಾಮರದಲ್ಲೂ ಸೆರೆಯಾಗಿದ್ದು, ಈ ತಂತ್ರದ ಯಶಸ್ಸಿಗೆ ಸಾಕ್ಷಿಯಾಗಿದೆ.






