2026ರ ಅಂಡರ್-19 ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಯುವ ಪಡೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಪಾಕಿಸ್ತಾನ ವಿರುದ್ಧ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಕೊನೆಯ ಎಸೆತದವರೆಗೂ ಗೆಲುವಿಗಾಗಿ ಹೋರಾಡಿದ ಭಾರತ, ಅಂತಿಮವಾಗಿ ಒಂದು ವಿಕೆಟ್ನಿಂದ ರೋಚಕ ಜಯ ಸಾಧಿಸಿ ಟ್ರೋಫಿಯನ್ನು ಎತ್ತಿಹಿಡಿದಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ 337 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಭಾರತ ಒಂದು ಹಂತದಲ್ಲಿ 252 ರನ್ಗಳಿಗೆ 8 ವಿಕೆಟ್ ಕಳೆದುಕೊಂಡು ಸೋಲಿನ ಭೀತಿಗೆ ಸಿಲುಕಿತ್ತು. ಆದರೆ ಕೊನೆಯ ಹಂತದಲ್ಲಿ ಮೋಹಿತ್ ಉಲ್ವಾ ಮತ್ತು ಮನಾಲ್ ಚೌಹಾಣ್ ಅದ್ಭುತ ಹೋರಾಟ ನಡೆಸಿ ತಂಡಕ್ಕೆ ಗೆಲುವಿನ ಆಸೆ ಮೂಡಿಸಿದರು. ಕೊನೆಯ ಎಸೆತದಲ್ಲಿ ಭಾರತದ ಗೆಲುವಿಗೆ ಮೂರು ರನ್ಗಳ ಅಗತ್ಯವಿತ್ತು. ಈ ವೇಳೆ ಮೋಹಿತ್ ಬೌಂಡರಿ ಬಾರಿಸುವ ಮೂಲಕ ಭಾರತಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟರು. ಈ ಮೂಲಕ ಅಂಡರ್-19 ಕ್ರಿಕೆಟ್ನಲ್ಲಿ ಭಾರತ ತನ್ನ ಅತ್ಯಧಿಕ ರನ್ ಚೇಸ್ ದಾಖಲೆಯನ್ನು ನಿರ್ಮಿಸಿತು.




ಪಾಕಿಸ್ತಾನದಿಂದ ಬೃಹತ್ ಮೊತ್ತ
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡದ ಆರಂಭಿಕ ಆಟಗಾರ ಉಸ್ಮಾನ್ ಖಾನ್ ಭರ್ಜರಿ ಶತಕ ಸಿಡಿಸಿದರು. ಅವರು 107 ರನ್ ಗಳಿಸಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು. ಮತ್ತೊಂದೆಡೆ ಅಬ್ದುಲ್ ಖಾದಿರ್ ಕೇವಲ 54 ಎಸೆತಗಳಲ್ಲಿ 8 ಸಿಕ್ಸರ್ ಹಾಗೂ 3 ಬೌಂಡರಿಗಳ ನೆರವಿನಿಂದ 80 ರನ್ ಚಚ್ಚಿದರು. ನಾಯಕ ಫರ್ಹಾನ್ ಯೂಸುಫ್ ಕೂಡ 63 ರನ್ ಗಳಿಸಿ ತಂಡದ ಮೊತ್ತ ಹೆಚ್ಚಿಸಿದರು. ಇವರ ಬ್ಯಾಟಿಂಗ್ ನೆರವಿನಿಂದ ಪಾಕಿಸ್ತಾನ 337 ರನ್ಗಳ ಬೃಹತ್ ಮೊತ್ತ ದಾಖಲಿಸಿತು. ಭಾರತ ಪರ ಕಾವ್ಯಾ ಪಟೇಲ್ 4 ವಿಕೆಟ್ ಪಡೆದರೆ, ಚಿಗುರುಪತಿ ವೆಂಕಟ್ 3 ವಿಕೆಟ್ ಕಬಳಿಸಿ ಮಿಂಚಿದರು.

ಆರ್ಯವೀರ್ ಸೆಹ್ವಾಗ್ ಅರ್ಧಶತಕ
338 ರನ್ಗಳ ಕಠಿಣ ಗುರಿ ಬೆನ್ನಟ್ಟಿದ ಭಾರತಕ್ಕೆ ಆರಂಭಿಕ ಆಟಗಾರ ಆರ್ಯವೀರ್ ಸೆಹ್ವಾಗ್ ಮತ್ತು ನಾಯಕ ಲಕ್ಷ್ಯ ರಾಯ್ಚಂದಾನಿ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್ಗೆ ಈ ಜೋಡಿ 95 ರನ್ಗಳ ಜೊತೆಯಾಟವಾಡಿತು. ಸೆಹ್ವಾಗ್ 58 ರನ್ ಗಳಿಸಿ ತಂಡಕ್ಕೆ ನೆರವಾದರು. ಬಳಿಕ ನಾಯಕ ಲಕ್ಷಯ್ ಕೂಡ ಅರ್ಧಶತಕ ಸಿಡಿಸಿ ಭರವಸೆ ಮೂಡಿಸಿದರು. ಆದರೆ ಪಾಕಿಸ್ತಾನದ ಚುರುಕಿನ ಫೀಲ್ಡಿಂಗ್ ಮತ್ತು ಅದ್ಭುತ ಕ್ಯಾಚ್ಗಳಿಂದಾಗಿ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಳು ಒಬ್ಬರ ಹಿಂದೆ ಒಬ್ಬರು ವಿಕೆಟ್ ಒಪ್ಪಿಸಿದರು. ಪರಿಣಾಮ ಭಾರತ 252 ರನ್ಗಳಿಗೆ 8 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಮೋಹಿತ್-ಮನಾಲ್ ಸೂಪರ್ ಬ್ಯಾಟಿಂಗ್
ಭಾರತಕ್ಕೆ ಕೊನೆಯ 51 ಎಸೆತಗಳಲ್ಲಿ 86 ರನ್ಗಳ ಅಗತ್ಯವಿತ್ತು. ಈ ಸಂದರ್ಭದಲ್ಲಿ ಮೋಹಿತ್ ಉಲ್ವಾ ಮತ್ತು ಮನಾಲ್ ಚೌಹಾಣ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು. ಇಬ್ಬರೂ ಪಾಕಿಸ್ತಾನದ ಬೌಲರ್ಗಳ ಮೇಲೆ ಪ್ರತಿದಾಳಿ ನಡೆಸಿ ಕೇವಲ 35 ಎಸೆತಗಳಲ್ಲಿ 57 ರನ್ಗಳ ಅಮೂಲ್ಯ ಜೊತೆಯಾಟ ನೀಡಿದರು. ಬೌಲಿಂಗ್ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದ್ದ ಮೋಹಿತ್, ಬ್ಯಾಟಿಂಗ್ನಲ್ಲಿ ತಮ್ಮ ಸಾಮರ್ಥ್ಯ ತೋರಿಸಿದರು. ಆದರೆ ಮನಾಲ್ 309 ರನ್ಗಳ ತಂಡದ ಮೊತ್ತದ ವೇಳೆ ವಿಕೆಟ್ ಒಪ್ಪಿಸಿದರು. ಇದರಿಂದ ಭಾರತ ಸೋಲಿಗೆ ಕೇವಲ ಒಂದು ವಿಕೆಟ್ ದೂರದಲ್ಲಿತ್ತು.
ಕೊನೆಯ ಎಸೆತದಲ್ಲಿ ಬೌಂಡರಿ, ಭಾರತಕ್ಕೆ ಟ್ರೋಫಿ
ಕೊನೆಯ ವಿಕೆಟ್ ಉಳಿದಿದ್ದ ಸಂದರ್ಭದಲ್ಲಿ ವೆಂಕಟ್, ಮೋಹಿತ್ಗೆ ಸಾಥ್ ನೀಡಿದರು. ವೆಂಕಟ್ ಕೂಡ ಎರಡು ಬೌಂಡರಿ ಬಾರಿಸಿ ಗೆಲುವಿನ ಆಸೆಯನ್ನು ಜೀವಂತವಾಗಿಟ್ಟರು. ಕೊನೆಯ ಓವರ್ನಲ್ಲಿ ಭಾರತಕ್ಕೆ 8 ರನ್ ಬೇಕಾಗಿದ್ದವು. ಮೊದಲ ಐದು ಎಸೆತಗಳಲ್ಲಿ 5 ರನ್ ಬಂದಿದ್ದರಿಂದ ಕೊನೆಯ ಎಸೆತದಲ್ಲಿ ಗೆಲುವಿಗೆ 3 ರನ್ಗಳ ಅಗತ್ಯವಿತ್ತು. ಒತ್ತಡದ ನಡುವೆಯೂ ಮೋಹಿತ್ ಉಲ್ವಾ ಅದ್ಭುತ ಬೌಂಡರಿ ಬಾರಿಸಿ ಭಾರತಕ್ಕೆ ರೋಚಕ ಗೆಲುವು ತಂದುಕೊಟ್ಟರು. ಮೋಹಿತ್ 26 ಎಸೆತಗಳಲ್ಲಿ 49 ರನ್ ಗಳಿಸಿ ಅಜೇಯರಾಗಿ ಉಳಿದರು. ಈ ಮೂಲಕ ಕೊನೆಯ ಕ್ಷಣದವರೆಗೂ ಕೈಚೆಲ್ಲದ ಭಾರತ ತಂಡ ಅಂಡರ್-19 ಏಷ್ಯಾ ಕಪ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
