ಬೆಂಗಳೂರು, ನವೆಂಬರ್ 12: ಪ್ರಧಾನಿ ನರೇಂದ್ರ ಮೋದಿ ನವೆಂಬರ್ 13 ರ ಶುಕ್ರವಾರ ಕರ್ನಾಟಕಕ್ಕೆ ಭೇಟಿ ನೀಡಲಿದ್ದು, ಬೆಂಗಳೂರು ಹಾಗೂ ಮೈಸೂರು ನಗರಗಳಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಪ್ರಧಾನ ಮಂತ್ರಿಗಳು ಬೆಳಗ್ಗೆ 10:05ಕ್ಕೆ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. 10:45ಕ್ಕೆ ಪ್ರಶಾಂತಿ ಕುಟೀರಂ ಸುವರ್ಣ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ, ಮಧ್ಯಾಹ್ನ 12:40ಕ್ಕೆ ತಾವರೆಕೆರೆ ಮೆಟ್ರೋ ನಿಲ್ದಾಣಕ್ಕೆ ಭೇಟಿ ನೀಡಿ, 1:15ಕ್ಕೆ ಐಐಎಂಬಿ ಆಡಿಟೋರಿಯಂನಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ವಂದೇ ಭಾರತ್ ರೈಲಿಗೆ ಚಾಲನೆ ನೀಡಿದ ನಂತರ, 2:30ಕ್ಕೆ ಹೆಲಿಕಾಪ್ಟರ್ ಮೂಲಕ ಮೈಸೂರಿಗೆ ಪ್ರಯಾಣ ಬೆಳೆಸಲಿದ್ದಾರೆ. ಸಂಜೆ 6 ಗಂಟೆಗೆ ಮೈಸೂರಿನಿಂದ ದೆಹಲಿಗೆ ಪ್ರಧಾನಿ ಮೋದಿ ವಾಪಸ್ ಆಗಲಿದ್ದಾರೆ.




ಇದಲ್ಲದೆ, ಪಿಂಕ್ ಲೈನ್ ಮೆಟ್ರೋ ನಿಲ್ದಾಣಗಳ ಹೆಸರು ಬದಲಾವಣೆಗೆ ಕೇಂದ್ರ ಸರ್ಕಾರ ಅಸ್ತು ಎಂದಿದೆ. ಮೂರು ನಿಲ್ದಾಣಗಳ ಹೆಸರು ಬದಲಾವಣೆಗೆ ರಾಜ್ಯ ಸರ್ಕಾರ ಮನವಿ ಮಾಡಿತ್ತು. ಐಐಎಂಬಿ ಮೆಟ್ರೋ ನಿಲ್ದಾಣವನ್ನು ಇನ್ನು ಮುಂದೆ ‘ಬಿಳೇಕಹಳ್ಳಿ ಐಐಎಂಬಿ ನಿಲ್ದಾಣ‘ ಎಂದು, ಜೆ.ಪಿ.ನಗರ 4ನೇ ಹಂತವನ್ನು ‘ಎನ್.ಎಸ್.ಪಾಳ್ಯ ಜೆ.ಪಿ.ನಗರ 4ನೇ ಹಂತ’ ಎಂದು ಮತ್ತು ತಾವರೆಕೆರೆ ನಿಲ್ದಾಣವನ್ನು ‘ಎಸ್.ಜಿ.ಪಾಳ್ಯ’ ಎಂದು ಮರುನಾಮಕರಣ ಮಾಡಲಾಗಿದೆ. ಸ್ಥಳೀಯರ ಬೇಡಿಕೆ ಮತ್ತು ಸಮಿತಿಯ ಶಿಫಾರಸಿನ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ.


