ಮಂಗಳೂರು,ನ.11: ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕದ ವತಿಯಿಂದ ಬಿಜೈ ಕಾಪಿಕಾಡ್ನಲ್ಲಿರುವ ಚಿಣ್ಣರ ತಂಗುಧಾಮ ದಲ್ಲಿ ಪುಟಾಣಿ ಮಕ್ಕಳೊಂದಿಗೆ ದೀಪಾವಳಿ ಹಬ್ಬದ ಸಂಭ್ರಮಾಚರಣೆಯನ್ನು ಅತ್ಯಂತ ಸಡಗರ, ಸಂಭ್ರಮ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು.




ನ. 09ರಂದು ಸಂಜೆ 4:30 ಗಂಟೆಗೆ ನಡೆದ ಈ ಕಾರ್ಯಕ್ರಮವು ದೀಪ ಬೆಳಗಿಸುವುದರೊಂದಿಗೆ ಹಾಗೂ ಪ್ರಾರ್ಥನೆಯ ಮೂಲಕ ಶುಭಾರಂಭಗೊಂಡಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂತೋಷ್ ಕುಲಾಲ್ ಅವರು ಉಪಸ್ಥಿತರಿದ್ದರು.ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಅಧ್ಯಕ್ಷರಾದ ದೀಪಿಕಾ ಮನೋಜ್, ಕಾರ್ಯದರ್ಶಿಯಾದ ಪ್ರಿಯಾ ಸುರೇಶ್ ಹಾಗೂ ಸಮಾಜ ಸೇವಾ ನಿರ್ದೇಶಕರಾದ ಲತಾ ಪೂಜಾರಿ ಅವರ ನೇತೃತ್ವದಲ್ಲಿ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. ಮಕ್ಕಳ ಮುಖದಲ್ಲಿ ಸಂತೋಷದ ನಗು ಮೂಡಿಸುವ ಉದ್ದೇಶದಿಂದ ವಿವಿಧ ಮನರಂಜನಾ ಸ್ಪರ್ಧೆಗಳು, ಆಟಗಳು, ನೃತ್ಯ, ಹಾಡು ಸೇರಿದಂತೆ ಹಲವಾರು ಆಕರ್ಷಕ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಅತಿಥಿಗಳ ಅಮೃತಹಸ್ತದಿಂದ ಬಹುಮಾನಗಳನ್ನು ವಿತರಿಸಲಾಯಿತು. ಮಕ್ಕಳೊಂದಿಗೆ ದೀಪಾವಳಿಯ ಸಂತೋಷವನ್ನು ಹಂಚಿಕೊಳ್ಳುವ ನಿಟ್ಟಿನಲ್ಲಿ ಸಿಹಿತಿಂಡಿಗಳು, ಪಟಾಕಿಗಳು, ಸಂಜೆಯ ತಿಂಡಿ ಹಾಗೂ ಬಾದಾಮಿ ಹಾಲನ್ನು ವಿತರಿಸಲಾಯಿತು. ನಂತರ ಮಕ್ಕಳೊಂದಿಗೆ ಪಟಾಕಿ ಸಿಡಿಸಿ ದೀಪಾವಳಿಯ ಸಂಭ್ರಮವನ್ನು ಹಂಚಿಕೊಂಡ ಕ್ಷಣಗಳು ಎಲ್ಲರ ಮನಸ್ಸಿನಲ್ಲಿ ಸಂತಸದ ನೆನಪಾಗಿ ಉಳಿದವು.


ಕಾರ್ಯಕ್ರಮದಲ್ಲಿ ಪ್ರಿಯಾ ಸುರೇಶ್ ಅವರು ಸ್ವಾಗತಿಸಿದರು. ಮುಖ್ಯ ಅತಿಥಿಗಳು ಹಾಗೂ ಘಟಕದ ಅಧ್ಯಕ್ಷರಾದ ದೀಪಿಕಾ ಮನೋಜ್ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಕಾರ್ಯಕ್ರಮದ ನಿರೂಪಣೆಯನ್ನು ಜಯಲಕ್ಷ್ಮಿ ಅವರು ಅಚ್ಚುಕಟ್ಟಾಗಿ ನಿರ್ವಹಿಸಿದರೆ, ಧನ್ಯವಾದ ಸಮರ್ಪಣೆಯನ್ನು ರೂಪಾ ಜನಾರ್ದನ್ ಅವರು ನೆರವೇರಿಸಿದರು. ಈ ಸಂದರ್ಭದಲ್ಲಿ ಮನೋಜ್ ಕುಮಾರ್, ಉದ್ಯಮಿಗಳು, ರೋಹಿತಾಶ್ವ, ನಿವೃತ್ತ ಪೊಲೀಸ್ ಉಪನಿರೀಕ್ಷಕರು, ವಾಣಿ ರೋಹಿತಾಶ್ವ, ಯುವವಾಹಿನಿ ಮಹಿಳಾ ಘಟಕದ ಮಾಜಿ ಅಧ್ಯಕ್ಷರು, ಮಾಜಿ ಪದಾಧಿಕಾರಿಗಳು, ಪದಾಧಿಕಾರಿಯವರು ಹಾಗೂ ಘಟಕದ ಸದಸ್ಯೆಯರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು .ಮಕ್ಕಳೊಂದಿಗೆ ಬೆರೆತು, ಅವರ ಸಂತೋಷದಲ್ಲಿ ನಮ್ಮ ಸಂತೋಷವನ್ನು ಕಂಡುಕೊಂಡ ಈ ದೀಪಾವಳಿ ಆಚರಣೆಯು ಅತ್ಯಂತ ಅರ್ಥಪೂರ್ಣವಾಗಿ ಹಾಗೂ ಅದ್ದೂರಿಯಾಗಿ ನೆರವೇರಿತು.
