ಬೆಂಗಳೂರು: ರಾಜ್ಯದಲ್ಲಿ ಬಹುದಿನಗಳಿಂದ ಬಾಕಿ ಉಳಿದಿರುವ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಸಾರ್ವತ್ರಿಕ ಚುನಾವಣೆಗಳನ್ನು ನಡೆಸಲು ರಾಜ್ಯ ಚುನಾವಣಾ ಆಯೋಗ ಭರದ ಸಿದ್ಧತೆ ಆರಂಭಿಸಿದೆ. ಈ ಸಂಬಂಧ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮಹತ್ವದ ಸುತ್ತೋಲೆ ರವಾನಿಸಿರುವ ಆಯೋಗ, ಚುನಾವಣಾಧಿಕಾರಿಗಳು (ಆರ್ಒ) ಹಾಗೂ ಸಹಾಯಕ ಚುನಾವಣಾಧಿಕಾರಿಗಳನ್ನು (ಎಆರ್ಒ) ತಕ್ಷಣವೇ ನಿಯೋಜಿಸಿ, ನವೆಂಬರ್ 16ರೊಳಗೆ ಪ್ರಸ್ತಾವನೆ ಸಲ್ಲಿಸುವಂತೆ ಕಟ್ಟುನಿಟ್ಟಿನ ಆದೇಶ ನೀಡಿದೆ.



ಕರ್ನಾಟಕ ಪಂಚಾಯತ್ ರಾಜ್ (ಚುನಾವಣೆಯನ್ನು ನಡೆಸುವ) ನಿಯಮಗಳು, 1993ರ ನಿಯಮ 6ರ ಅನ್ವಯ ಅಧಿಕಾರಿಗಳನ್ನು ನೇಮಕ ಮಾಡುವಂತೆ ಆಯೋಗದ ಅಧೀನ ಕಾರ್ಯದರ್ಶಿ ಪಿ.ಎಸ್. ಮರಬಳ್ಳಿ ಅವರು ನವೆಂಬರ್ 7ರಂದು ಈ ಅಧಿಕೃತ ಆದೇಶ ಹೊರಡಿಸಿದ್ದಾರೆ.


ಜಿಲ್ಲಾ ಪಂಚಾಯತ್ ಕ್ಷೇತ್ರಗಳಿಗೆ ಯಾರಿಗೆ ಜವಾಬ್ದಾರಿ?
ಚುನಾವಣಾಧಿಕಾರಿ (ಆರ್ಒ): ತಾಲೂಕಿನ ವ್ಯಾಪ್ತಿಯಲ್ಲಿರುವ ಎಲ್ಲಾ ಜಿಲ್ಲಾ ಪಂಚಾಯತ್ ಕ್ಷೇತ್ರಗಳಿಗೆ ಒಬ್ಬ ಉಪ ವಿಭಾಗಾಧಿಕಾರಿ (ಎಸಿ) ಅಥವಾ ತತ್ಸಮಾನ ಹುದ್ದೆಯ ಅಧಿಕಾರಿಯನ್ನು ಚುನಾವಣಾಧಿಕಾರಿಯನ್ನಾಗಿ ನೇಮಿಸಬೇಕು.
ಹೆಚ್ಚುವರಿ ಕ್ಷೇತ್ರಗಳಿದ್ದರೆ: ಒಂದು ವೇಳೆ ತಾಲೂಕಿನಲ್ಲಿ 10ಕ್ಕಿಂತ ಹೆಚ್ಚು ಜಿ.ಪಂ ಕ್ಷೇತ್ರಗಳಿದ್ದರೆ, ಇಬ್ಬರು ಚುನಾವಣಾಧಿಕಾರಿಗಳನ್ನು ನೇಮಿಸಬಹುದಾಗಿದೆ.
ಸಹಾಯಕ ಚುನಾವಣಾಧಿಕಾರಿ (ಎಆರ್ಒ): ಪ್ರತಿ ಚುನಾವಣಾಧಿಕಾರಿಗೆ ನೆರವಾಗಲು ತಹಸೀಲ್ದಾರ್ ಹುದ್ದೆಗೆ ತತ್ಸಮಾನವಾದ ಅಧಿಕಾರಿಯನ್ನು (ಆಯಾ ತಾಲೂಕು ತಹಸೀಲ್ದಾರರನ್ನು ಹೊರತುಪಡಿಸಿ) ಸಹಾಯಕ ಚುನಾವಣಾಧಿಕಾರಿಯನ್ನಾಗಿ ನೇಮಿಸಬೇಕು.
ತಾಲೂಕು ಪಂಚಾಯತ್ ಕ್ಷೇತ್ರಗಳ ಹೊಣೆ ಯಾರಿಗೆ?
- ಚುನಾವಣಾಧಿಕಾರಿ (ಆರ್ಒ): ಸರಾಸರಿ 15 ಕ್ಷೇತ್ರಗಳಿಗೆ ಒಬ್ಬರಂತೆ ತಾಲೂಕು ತಹಸೀಲ್ದಾರ್ ಅಥವಾ ತತ್ಸಮಾನ ಹುದ್ದೆಯ ಅಧಿಕಾರಿಯನ್ನು ನೇಮಿಸಬೇಕು.
- ಸಹಾಯಕ ಚುನಾವಣಾಧಿಕಾರಿ (ಎಆರ್ಒ): ಚುನಾವಣಾಧಿಕಾರಿಗೆ ನೆರವಾಗಲು ಒಬ್ಬ ಉಪ ತಹಸೀಲ್ದಾರ್ ಅಥವಾ ತತ್ಸಮಾನ ಹುದ್ದೆಯ ಅಧಿಕಾರಿಯನ್ನು ನೇಮಿಸಬೇಕು.
ಆಯೋಗದಿಂದ ಅನುಮೋದನೆ ದೊರೆತ ತಕ್ಷಣವೇ ನೇಮಕಾತಿ ಆದೇಶವನ್ನು ಅಧಿಕೃತ ರಾಜ್ಯಪತ್ರದಲ್ಲಿ ಪ್ರಕಟಿಸಿ, ಪ್ರತಿಯನ್ನು ಆಯೋಗಕ್ಕೆ ಕಳುಹಿಸಿಕೊಡುವಂತೆಯೂ ನಿರ್ದೇಶಿಸಲಾಗಿದೆ. ಈ ಬೆಳವಣಿಗೆಯಿಂದಾಗಿ ರಾಜ್ಯದಲ್ಲಿ ಶೀಘ್ರದಲ್ಲೇ ಪಂಚಾಯತ್ ಚುನಾವಣಾ ದಿನಾಂಕಗಳು ಘೋಷಣೆಯಾಗುವ ಸಾಧ್ಯತೆ ದಟ್ಟವಾಗಿದೆ.
