ರಾಜ್ಯದ ಪಡಿತರ ಚೀಟಿದಾರರಿಗೆ ಆಹಾರ, ನಾಗರಿಕ ಪೂರೈಕೆ ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯು ಇ-ಕೆವೈಸಿ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಿದೆ. ಇದನ್ನು ಮಾಡಿಸದಿದ್ದರೆ ಏನಾಗಲಿದೆ ಎನ್ನುವ ಮಹತ್ವದ ಅಪ್ಡೇಟ್ ಇಲ್ಲಿದೆ ನೋಡಿ.



ಇಲಾಖೆಯ ಮಾಹಿತಿಯ ಪ್ರಕಾರ, ರಾಜ್ಯದಲ್ಲಿ ಮರು ಇ-ಕೆವೈಸಿ ಮಾಡಿಸಬೇಕಿದ್ದ ಒಟ್ಟು 2,67,64,276 ಪಡಿತರ ಚೀಟಿ ಫಲಾನುಭವಿಗಳ ಪೈಕಿ, ನವೆಂಬರ್ 3ರ ವರೆಗೆ 2.26 ಕೋಟಿಗೂ ಅಧಿಕ ಜನರು ತಮ್ಮ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಆದರೆ ಇನ್ನೂ ಬರೋಬ್ಬರಿ 41,33,529 ಫಲಾನುಭವಿಗಳು ಇ-ಕೆವೈಸಿ ಮಾಡಿಸುವುದು ಬಾಕಿ ಉಳಿದಿದೆ.


ಈಗಾಗಲೇ ಪಡಿತರ ಚೀಟಿದಾರರ ಹಿತದೃಷ್ಟಿಯಿಂದ ಹಲವು ಬಾರಿ ವಿಸ್ತರಣೆ ಮಾಡಲಾಗಿತ್ತು. ಪದೇ ಪದೇ ದಿನಾಂಕ ವಿಸ್ತರಣೆ ಮಾಡುವುದರಿಂದ ವಿತರಣಾ ವ್ಯವಸ್ಥೆಯ ಪಾರದರ್ಶಕತೆಗೆ ಧಕ್ಕೆ ಆಗುತ್ತದೆ ಎಂಬ ಕಾರಣಕ್ಕೆ, ನವೆಂಬರ್ 10ರ ನಂತರ ಯಾವುದೇ ಕಾಲಾವಕಾಶ ನೀಡದಿರಲು ಸರ್ಕಾರ ತೀರ್ಮಾನಿಸಿದೆ. ಇ-ಕೆವೈಸಿ ಮಾಡಿಸದಿದ್ದರೆ ಪಡಿತರ ಸ್ಥಗಿತ ಸಾಧ್ಯತೆ ಅಂತಿಮ ಗಡುವಿನ ಒಳಗಾಗಿ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸದಿದ್ದರೆ, ನಿಯಮಾನುಸಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ತಿಳಿಸಿದೆ. ಅಂತಹ ಫಲಾನುಭವಿಗಳಿಗೆ ಮಾಸಿಕವಾಗಿ ದೊರೆಯುವ ಉಚಿತ ಅಥವಾ ಸಬ್ಸಿಡಿ ಪಡಿತರ ಧಾನ್ಯಗಳ ವಿತರಣೆಯನ್ನು ಸ್ಥಗಿತಗೊಳಿಸುವ ಅಥವಾ ಅವರ ರೇಷನ್ ಕಾರ್ಡ್ ಅನ್ನು ರದ್ದುಗೊಳಿಸುವ ಸಾಧ್ಯತೆ ಹೆಚ್ಚಾಗಿದೆ. ಆದ್ದರಿಂದ ಪ್ರತಿಯೊಬ್ಬ ಸದಸ್ಯರೂ ತಕ್ಷಣವೇ ಇದನ್ನು ಪೂರ್ಣಗೊಳಿಸುವುದು ಸೂಕ್ತ.
