ಬೆಂಗಳೂರು, ನ. 01: ಕೇಂದ್ರ ಸರ್ಕಾರವು ರಾಜ್ಯಗಳಿಗೆ 1.09 ಲಕ್ಷ ಕೋಟಿ ರೂ. ತೆರಿಗೆ ಪಾಲನ್ನು ಬಿಡುಗಡೆ ಮಾಡಿದೆ. ಇದು ರಾಜ್ಯಗಳಿಗೆ ಪ್ರತಿ ತಿಂಗಳು ನಿಯಮಿತವಾಗಿ ನೀಡುವ ತೆರಿಗೆ ಪಾಲಿನ ಜೊತೆಗೆ ಬಿಡುಗಡೆಯಾಗಿರುವ ಹೆಚ್ಚುವರಿ ಮೊತ್ತವಾಗಿದೆ. ಇದರಲ್ಲಿ ಕರ್ನಾಟಕಕ್ಕೆ 4,504 ಕೋಟಿ ರೂ. ಹಂಚಿಕೆಯಾಗಿದ್ದು, ಅಭಿವೃದ್ಧಿ ಯೋಜನೆಗಳಿಗೆ ಬಲ ಸಿಕ್ಕಿದೆ. ಇದು ಪ್ರಸಕ್ತ ಹಣಕಾಸು ವರ್ಷದ ಎರಡನೇ ಹೆಚ್ಚುವರಿ ಕಂತಾಗಿದೆ.


ಕರ್ನಾಟಕಕ್ಕೆ ಕೇವಲ 4,504 ಕೋಟಿ ರೂ.
ಬರದಿಂದ ತತ್ತರಿಸಿರುವ ಮಧ್ಯೆ ಕರ್ನಾಟಕಕ್ಕೆ ಬಿಡುಗಡೆಯಾಗಿರುವ 4,504 ಕೋಟಿ ರೂ. ಮೊತ್ತವು ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಮೂಲಸೌಕರ್ಯ ಯೋಜನೆಗಳು ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಆರ್ಥಿಕ ಕೊರತೆಯಾಗದಂತೆ ವೇಗ ನೀಡಲು ಸಹಕಾರಿಯಾಗಲಿದೆ. ಈ ವರ್ಷದ ಸೆಪ್ಟೆಂಬರ್ನಲ್ಲಿ ಒಟ್ಟು ಜಿಎಸ್ಟಿ ಸಂಗ್ರಹವು ಶೇಕಡಾ 14.7 ರಷ್ಟು ಏರಿಕೆಯಾಗಿ 2.03 ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದೆ. ಇದರಲ್ಲಿ ಕರ್ನಾಟಕವು ಶೇಕಡಾ 16 ರಷ್ಟು ಏರಿಕೆ ಕಂಡು 13,884 ಕೋಟಿ ರೂ.ಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಆದರೂ ಸಹ ಉತ್ತರ ಪ್ರದೇಶ (19,208 ಕೋಟಿ ರೂ.) ಹಾಗೂ ಬಿಹಾರ (10,845 ಕೋಟಿ ರೂ.) ರಾಜ್ಯಗಳಿಗೆ ಅತಿ ಹೆಚ್ಚು ಮೊತ್ತವನ್ನು ನೀಡಲಾಗಿದೆ.

