ಬೆಳ್ತಂಗಡಿ; ಸ್ಯಾಕ್ಸೋಫೋನ್ ವಾದನ ಕ್ಷೇತ್ರದಲ್ಲಿ ಅತ್ಯುನ್ನತ ಕಲಾವಿದರಾಗಿ, ಆಕಾಶವಾಣಿ ಮತ್ತು ದೂರದರ್ಶನ ಎ ಗ್ರೇಡ್ ಮಾನ್ಯತೆ ಪಡೆದ ರಾಜ್ಯದ ಅಗ್ರಮಾನ್ಯರಾಗಿ ಹೆಸರುವಾಸಿಯಾಗಿರುವ ಧರ್ಮಸ್ಥಳ ಬಿ. ಪ್ರಕಾಶ ದೇವಾಡಿಗ ಅವರು ಅಮೆರಿಕದಲ್ಲಿ ನಡೆಯುವ “ಶ್ರೀಮದ್ ಭಗವದ್ಗೀತಾ ಯಾಗ” ಕಾರ್ಯಕ್ರಮದಲ್ಲಿ ಸ್ಯಾಕ್ಸೋಫೋನ್ ಕಾರ್ಯಕ್ರಮ ನೀಡುವುದಕ್ಕಾಗಿ ನಾಲ್ಕನೇ ಬಾರಿಗೆ ತೆರಳಲಿದ್ದಾರೆ.

ಸುಜ್ಞಾನ ರಿಲಿಜಿಯಸ್ ಆ್ಯಂಡ್ ಚಾರಿಟೆಬಲ್ ಫೌಂಡೇಶನ್ ಟೆಂಪಿ ಫೀನಿಕ್ಸ್ ಇಲ್ಲಿನ ಶ್ರೀ ವೆಂಕಟಕೃಷ್ಣ ದೇವಾಲಯದಲ್ಲಿ ಅ.22 ರಿಂದ ಅ.24 ರ ವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಅವರು ಸಾಂಪ್ರದಾಯಿಕ ವಾದನ ನಡೆಸಿಕೊಡಲು ಭಾರತದಿಂದ ಆಹ್ವಾನಿತರಾಗಿದ್ದಾರೆ.

ಧರ್ಮಸ್ಥಳ ಬಿ. ಪ್ರಕಾಶ ದೇವಾಡಿಗ ಅವರು ಆಕಾಶವಾಣಿ ದೂರದರ್ಶನ ఎ ಗ್ರೇಡ್ ಕಲಾವಿದರಾಗಿದ್ದು ಕಳೆದ 27 ವರ್ಷಗಳಿಂದ ಮುಂಬಯಿ, ಚೆನ್ನೈ, ದುಬೈ ಸಹಿತ ಹಲವು ರಾಜ್ಯಗಳಲ್ಲಿ ತಮ್ಮ ಪ್ರಬುದ್ಧ ಕಲಾಗಾರಿಕೆ ಪ್ರದರ್ಶಿಸಿದ್ದಾರೆ. ಈ ಹಿಂದೆಯೂ ಅವರು ಮೂರು ಬಾರಿ ಅಮೆರಿಕಾದಲ್ಲಿ ಯಶಸ್ವಿ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಬೆಂಗಳೂರು ದೂರದರ್ಶನದ ದಕ್ಷಿಣ ವಲಯ ಸಂಗೀತ ಕಾರ್ಯಕ್ರಮ, ಕೇಂದ್ರ ಸರಕಾರದ ಪ್ರಸಾರ ಭಾರತಿಯವರ ಪ್ರತಿಷ್ಠಿತ ಆಕಾಶವಾಣಿ ಸಂಗೀತ ಸಮ್ಮೇಳನ, ಚೆನ್ನೈ ದೂರದರ್ಶನದ ‘ಇಸೈ ಮಾಲೈ’ ಕಾರ್ಯಕ್ರಮ, ತಿರುಪತಿಯ ಪ್ರತಿಷ್ಠಿತ “ನಾದ ನೀರಾಜನಂ” ಕಾರ್ಯಕ್ರಮ ಸೇರಿದಂತೆ ಅನೇಕ ರಾಷ್ಟ್ರ ಮಟ್ಟದ ಕಾರ್ಯಕ್ರಮಗಳನ್ನೂ ನೀಡಿರುವ ಅನುಭವಿ ಯಾಗಿದ್ದಾರೆ. ಪ್ರಸ್ತುತ ಅವರು ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಮುಖ್ಯ ವಾದ್ಯ ವಾದಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
