ಚಿತ್ರದುರ್ಗ, ಅ.15: ಚಿತ್ರದುರ್ಗದಲ್ಲಿ 22 ವರ್ಷದ ಯುವಕನೊಬ್ಬನನ್ನು ಅಪಹರಿಸಿ, ಬಂದಿಸಿ ಹಲ್ಲೆ ನಡೆಸಿ, ಬಲವಂತವಾಗಿ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ (Gender Reassignment Surgery) ಒಳಪಡಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಇಬ್ಬರು ಟ್ರಾನ್ಸ್ಜೆಂಡರ್ಗಳ ವಿರುದ್ಧ ಪರಶುರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ. ಸಂತ್ರಸ್ತ ಯುವಕ ಕಳೆದ ನಾಲ್ಕು ವರ್ಷಗಳಿಂದ ಚಿತ್ರದುರ್ಗದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು, ಸಣ್ಣದಾಗಿ ಹೂವಿನ ವ್ಯಾಪಾರ ಮಾಡುತ್ತಿದ್ದನು. ದೇವಸ್ಥಾನಗಳಿಗೆ ಹೂವು ಪೂರೈಸುವ ವೇಳೆ ಆತನಿಗೆ ಟ್ರಾನ್ಸ್ಜೆಂಡರ್ ವ್ಯಕ್ತಿಯೊಬ್ಬರ ಪರಿಚಯವಾಗಿತ್ತು.

ಆ ಟ್ರಾನ್ಸ್ಜೆಂಡರ್ ಮತ್ತು ಮತ್ತೊಬ್ಬ ವ್ಯಕ್ತಿ ಸೇರಿ ಯುವಕನಿಗೆ ವಿರೋಧವಿದ್ದರೂ ಬಲವಂತವಾಗಿ ಮಹಿಳೆಯರ ಬಟ್ಟೆ ಧರಿಸಿ ನೃತ್ಯ ಮಾಡುವಂತೆ ಒತ್ತಾಯಿಸುತ್ತಿದ್ದರು. ಸೆಪ್ಟೆಂಬರ್ 1 ರಂದು ಆತನ ಮುಖಕ್ಕೆ ಬಟ್ಟೆ ಕಟ್ಟಿ, ವಾಹನದಲ್ಲಿ ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಯಾವುದೇ ಒಪ್ಪಿಗೆಯಿಲ್ಲದೆ ಜನನಾಂಗದ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ.

ಶಸ್ತ್ರಚಿಕಿತ್ಸೆಯ ಬಳಿಕ ಚಿತ್ರದುರ್ಗದ ಸ್ಟೇಡಿಯಂ ರಸ್ತೆ ಬಳಿಯ ಬುದ್ರಾನಗರದ ಕೊಠಡಿಯೊಂದರಲ್ಲಿ ಆತನನ್ನು ಕೂಡಿಹಾಕಿ ಹೊರಗೆ ಲಾಕ್ ಮಾಡಿದ್ದರು. ಸೆಪ್ಟೆಂಬರ್ 11 ರಂದು ಧಾರ್ಮಿಕ ವಿಧಿವಿಧಾನದ ವೇಳೆ ಆರೋಪಿಗಳಲ್ಲಿ ಒಬ್ಬರು ಶಸ್ತ್ರಚಿಕಿತ್ಸೆಯ ಗಾಯದ ಬಳಿ ಇದ್ದಿಲು ಕಾವನ್ನು ಇಟ್ಟಿದ್ದರಿಂದ ಯುವಕನ ಎರಡೂ ತೊಡೆಗಳಿಗೆ ಸುಟ್ಟ ಗಾಯಗಳಾಗಿವೆ. ನೋವಿನಿಂದ ಆತ ಜೋರಾಗಿ ಕೂಗಾಡಿದಾಗ ಕೂಡ ಹಲ್ಲೆ ನಡೆಸಲಾಗಿದೆ.
ಸೆಪ್ಟೆಂಬರ್ 29 ರಂದು ಆರೋಪಿಗಳು ಯುವಕನನ್ನು ಬಿಡುಗಡೆ ಮಾಡಿ, ಚಿತ್ರದುರ್ಗ ನಗರದ ಚಳ್ಳಕೆರೆ ವೃತ್ತದಲ್ಲಿ ಭಿಕ್ಷೆ ಬೇಡುವಂತೆ ಸೂಚಿಸಿದ್ದರು. ಬಳಿಕ ಯುವಕ ತನ್ನ ಕುಟುಂಬಕ್ಕೆ ಕರೆ ಮಾಡಿ ತನಗೆ ನಡೆಯಲು ಆಗುತ್ತಿಲ್ಲವೆಂದೂ, ರಕ್ತಸ್ರಾವ ಹಾಗೂ ಸುಸ್ತು ಆಗುತ್ತಿರುವುದಾಗಿ ತಿಳಿಸಿದ್ದಾನೆ. ಪೋಷಕರು ಆತನನ್ನು ಜಜ್ಜೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದು, ನಂತರ ಪರಶುರಾಂಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಅಕ್ಟೋಬರ್ 9 ರಂದು ಯುವಕನ ತಂದೆ ನೀಡಿದ ದೂರಿನ ಮೇರೆಗೆ ಭಾರತೀಯ ನ್ಯಾಯ ಸಂಹಿತೆಯ (BNS) ಅಡಿಯಲ್ಲಿ ಕಾನೂನುಬಾಹಿರ ಗುಂಪು ಸೇರುವುದು, ಹಲ್ಲೆ, ಅಕ್ರಮ ಬಂಧನ, ಅಪಹರಣ, ಕ್ರಮಿನಲ್ ಸಂಚು ಮತ್ತು ಮಾನವ ಕಳ್ಳಸಾಗಣೆ ಸೇರಿದಂತೆ ವಿವಿಧ ಗಂಭೀರ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಇದೀಗ ಚಿತ್ರದುರ್ಗ ನಗರ ಠಾಣೆ ಪೊಲೀಸರು, ಪ್ರಕರಣದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಾದ ಅನುಷ್ಕಾ, ನಳಿನಾ ಇದೀಗ ಪೋಲಿಸರು ವಶಪಡೆದಿದ್ದಾರೆ.
