ನವದೆಹಲಿ, ಅ. 2: ಗಾಂಧಿ ಜಯಂತಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಬ್ಬರು ನಾಯಕರನ್ನು ಸ್ಮರಿಸಿದ್ದಾರೆ. ಮಹಾತ್ಮ ಗಾಂಧಿಯ ಸತ್ಯ, ಅಹಿಂಸೆ, ಸರಳತೆ ಮತ್ತು ಸೇವೆಯ ಸಂದೇಶಗಳು ಉತ್ತಮ ಸಮಾಜ ನಿರ್ಮಾಣಕ್ಕೆ ದಾರಿ ತೋರಿಸಲಿ ಎಂದು ಮೋದಿ ಹೇಳಿದ್ದಾರೆ. ಇದೇ ವೇಳೆ, ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸರಳತೆ ಮತ್ತು ದೇಶ ಸೇವೆಯ ಬದ್ಧತೆ ಸದಾ ಸ್ಫೂರ್ತಿದಾಯಕ ಎಂದು ಅವರು ತಿಳಿಸಿದ್ದಾರೆ.


ಮೋದಿ ತಮ್ಮ ಸಂದೇಶದಲ್ಲಿ, “ಬಾಪು ಅವರ ಶಾಶ್ವತ ಸಂದೇಶವು ಉತ್ತಮ ಸಮಾಜ ಮತ್ತು ವಿಕಸಿತ ಭಾರತ ನಿರ್ಮಾಣದತ್ತ ನಮ್ಮನ್ನು ಮುನ್ನಡೆಸಲಿ” ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ಗಾಂಧೀಜಿಯವರ ಜೀವನದಲ್ಲಿ ಸರಳತೆ, ಧೈರ್ಯ, ಸೇವೆ ಮತ್ತು ಮಾನವೀಯತೆಗೆ ವಿಶೇಷ ಸ್ಥಾನವಿತ್ತು ಎಂದು ಅವರು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ಸ್ಮರಿಸಿದ ಮೋದಿ, ಅವರ ಸರಳ ಜೀವನ, ಪ್ರಾಮಾಣಿಕತೆ ಮತ್ತು ದೇಶದ ಮೇಲಿನ ಸಮರ್ಪಣೆ ಇಂದಿಗೂ ಜನರಿಗೆ ಸ್ಫೂರ್ತಿ ನೀಡುತ್ತಿದೆ ಎಂದು ಹೇಳಿದ್ದಾರೆ. ಶಾಸ್ತ್ರಿಜಿ ನೀಡಿದ ‘ಜೈ ಜವಾನ್, ಜೈ ಕಿಸಾನ್’ ಘೋಷಣೆ ದೇಶದ ಸೈನಿಕರು ಮತ್ತು ರೈತರ ಮಹತ್ವವನ್ನು ಪ್ರತಿಬಿಂಬಿಸುತ್ತದೆ.
ಒಂದೇ ದಿನ ಇಬ್ಬರು ಮಹಾನ್ ನಾಯಕರ ಜಯಂತಿ
ಅಕ್ಟೋಬರ್ 2ರಂದು ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಇಬ್ಬರ ಜನ್ಮದಿನವನ್ನು ದೇಶಾದ್ಯಂತ ಆಚರಿಸಲಾಗುತ್ತದೆ. ಗಾಂಧೀಜಿಯವರ ಜನ್ಮದಿನವನ್ನು ಗಾಂಧಿ ಜಯಂತಿಯಾಗಿ ಆಚರಿಸಿದರೆ, ಶಾಸ್ತ್ರಿಜಯವರ ಜನ್ಮದಿನವನ್ನು ಶಾಸ್ತ್ರಿ ಜಯಂತಿಯಾಗಿ ಆಚರಿಸಲಾಗುತ್ತದೆ.



