ಮಂಗಳೂರು: ಶ್ರೀ ಕೃಷ್ಣ ಜನ್ಮಾಷ್ಠಮಿ ಮತ್ತು ಕ್ರೈಸ್ತ ಸಮುದಾಯದವರ ಮರಿಯ ಜಯಂತಿ/ತೆನೆ ಹಬ್ಬದ ಹಿನ್ನೆಲೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ಸಾರ್ವತ್ರಿಕ ರಜೆ ಘೋಷಿಸುವಂತೆ ಶಾಸಕ ವೇದವ್ಯಾಸ ಕಾಮತ್ ಅವರು ದ.ಕ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಿದರು.


ನಾಡಿನೆಲ್ಲೆಡೆ ಹಬ್ಬಗಳ ಸಂಭ್ರಮ ಆರಂಭವಾಗಿದ್ದು, ಇದೇ ಸೆಪ್ಟೆಂಬರ್ 4 ರಂದು ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಅಸಂಖ್ಯಾತ ಭಕ್ತರು, ಶ್ರದ್ಧಾ ಭಕ್ತಿ ಹಾಗೂ ಸಂಭ್ರಮದಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಿದ್ದಾರೆ. ಇದು ಕೇವಲ ಧಾರ್ಮಿಕ ಆಚರಣೆಯಾಗಿರದೇ, ಭಾರತೀಯ ಸಂಸ್ಕೃತಿ, ಕುಟುಂಬ ಮೌಲ್ಯಗಳು ಮತ್ತು ನೈತಿಕ ಶಿಕ್ಷಣವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಮಹತ್ವದ ಸಾಂಸ್ಕೃತಿಕ ಪರಂಪರೆಯಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಅದೇ ರೀತಿಯಲ್ಲಿ ಸೆಪ್ಟೆಂಬರ್ 8 ರಂದು ಕರಾವಳಿ ಭಾಗದಲ್ಲಿ ಕ್ರೈಸ್ತ ಸಮುದಾಯದವರು ಮರಿಯ ಜಯಂತಿ/ ತೆನೆಹಬ್ಬವನ್ನು ಅತ್ಯಂತ ವಿಶೇಷವಾಗಿ ಆಚರಿಸುವುದಾಗಿದ್ದು ಹಬ್ಬದ ಆಚರಣೆಗೆ ಅನುಕೂಲವಾಗುವಂತೆ ರಜೆ ಘೋಷಣೆ ಮಾಡಬೇಕೆಂದು ಆ ಸಮುದಾಯದ ಹಲವಾರು ಮುಖಂಡರು, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಪ್ರಮುಖರು, ನನ್ನಲ್ಲಿ ಮನವಿ ಮಾಡಿರುತ್ತಾರೆ. ಈ ನಿಟ್ಟಿನಲ್ಲಿ ತಮ್ಮ ವಿವೇಚನೆಯಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಸೆಪ್ಟೆಂಬರ್ 4 ರಂದು ಶ್ರೀ ಕೃಷ್ಣ ಜನ್ಮಾಷ್ಠಮಿ ಹಾಗೂ ಸೆಪ್ಟೆಂಬರ್ 8 ರಂದು ಕ್ರೈಸ್ತ ಸಮುದಾಯದವರ ಮರಿಯ ಜಯಂತಿ/ತೆನೆ ಹಬ್ಬಕ್ಕೆ ಸ್ಥಳೀಯ ರಜೆ ಘೋಷಿಸುವಂತೆ ಕೋರಿದರು.



