ಪಡಂಗಡಿ: ಸಾಮರಸ್ಯಕ್ಕೆ ಹೆಸರಾಗಿರುವ ಪಡಂಗಡಿಯಲ್ಲಿ ಮತ್ತೊಂದು ಸತ್ಸಂಪ್ರದಾಯ ಮೂಡಿಬಂದಿದೆ. ಈದ್ ಮಿಲಾದ್ ಮೆರವಣಿಗೆಯ ಹಾದಿಯಲ್ಲಿ ಸಾಗಿದ ರಾಲಿಯ ಸದಸ್ಯರಿಗೆ ಸ್ಥಳೀಯ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು ಸಿಹಿ ತಿಂಡಿ ವಿತರಿಸುವ ಮೂಲಕ ಪರಸ್ಪರ ಅನ್ಯೋನ್ಯತೆ ಮೆರೆದಿದ್ದಾರೆ. ಸಮಿತಿಯ ಈ ಸೌಹಾರ್ದಯುತ ಹೆಜ್ಜೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ಕಳೆದ ಮೂರು ವರ್ಷಗಳಿಂದಲೂ ಈ ಸಂಪ್ರದಾಯ ಮುಂದುವರಿದಿದೆ.


ಇಂದಿನ ದಿನಗಳಲ್ಲಿ ಸಮಾಜದಲ್ಲಿ ಶಾಂತಿ-ಸಹಬಾಳ್ವೆಯ ಅಗತ್ಯತೆ ಎಷ್ಟಿದೆ ಎಂಬುದನ್ನು ಪಡಂಗಡಿಯ ಗಣೇಶೋತ್ಸವ ಸಮಿತಿಯವರ ನಡೆ ತೋರಿಸಿಕೊಟ್ಟಿದೆ. ಈದ್ ಮಿಲಾದ್ ರಾಲಿಯಲ್ಲಿ ಭಾಗವಹಿಸಿದ್ದವರಿಗೆ ಸಂತೋಷ್ ಕುಮಾರ್ ಜೈನ್, ವಿತೇಶ್ ಕುಮಾರ್ ಜೈನ್, ಸುಕೇಶ್ ಓಡಿಲು, ಉಮೇಶ್ ಪೂಜಾರಿ, ಪದ್ಮನಾಭ ನಾಯ್ಕ್, ಅಶ್ವಥ್ ಪಾಳ್ತ್ಯಾರ್ ಹಾಗೂ ಶ್ರೀ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು ಸೇರಿ ಸಿಹಿ ತಿಂಡಿಗಳನ್ನು ನೀಡಿ ಗೌರವಿಸುವ ಮೂಲಕ ಈ ಭಾಗದ ಹಿಂದೂ-ಮುಸ್ಲಿಮ್ ಬಾಂಧವರು ನಾವೆಲ್ಲರೂ ಒಂದೇ ಎಂಬ ಸಂದೇಶವನ್ನು ಸಾರಿದ್ದಾರೆ. ಈ ಐಕ್ಯತೆಯ ಕಾರ್ಯ ಸ್ಥಳೀಯರಲ್ಲಿ ಹರ್ಷ ಮೂಡಿಸಿದೆ.



