ಮಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ಗೆ ಒಂದರ ಹಿಂದೆ ಒಂದರಂತೆ ಕಾನೂನು ಸಂಕಷ್ಟಗಳು ಎದುರಾಗುತ್ತಿರುವ ಬೆನ್ನಲ್ಲೇ, ಪತ್ನಿ ವಿಜಯಲಕ್ಷ್ಮಿ ದರ್ಶನ್ ಇದೀಗ ಕರಾವಳಿಯ ದೈವಗಳ ಮೊರೆ ಹೋಗಿದ್ದಾರೆ.


ಕರಣದಲ್ಲಿ ದರ್ಶನ್ಗೆ ಜಾಮೀನು ವಿಚಾರದಲ್ಲೂ ಹಿನ್ನಡೆಯಾಗಿದ್ದು, ಆಪ್ತ ಹಾಗೂ ಪ್ರಕರಣದ ಆರೋಪಿಯಾಗಿದ್ದ ಪ್ರದೋಶ್ ಮಾಫಿ ಸಾಕ್ಷಿಯಾಗಿ ಬದಲಾಗಿರುವುದು ಮತ್ತೊಂದು ಪ್ರಮುಖ ಬೆಳವಣಿಗೆಯಾಗಿದೆ. ಪ್ರದೋಶ್ ನೀಡಿರುವ ಹೇಳಿಕೆ ಪ್ರಕರಣದಲ್ಲಿ ದರ್ಶನ್ಗೆ ಪ್ರತಿಕೂಲವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ.
ಮಂಗಳೂರಿಗೆ ಬಂದ ವಿಜಯಲಕ್ಷ್ಮಿ
ಪತಿಯ ಕಾನೂನು ಸಂಕಷ್ಟಗಳ ನಡುವೆ ವಿಜಯಲಕ್ಷ್ಮಿ ದರ್ಶನ್ ಮಂಗಳೂರಿಗೆ ಆಗಮಿಸಿ ಕರಾವಳಿಯ ದೈವಾರಾಧನೆಯಲ್ಲಿ ಪಾಲ್ಗೊಂಡಿದ್ದಾರೆ. ಮಂಗಳೂರಿನ ಪ್ರಸಿದ್ಧ ಮಂದಾರಬೈಲು ರಕ್ತೇಶ್ವರಿ ಸನ್ನಿಧಿಗೆ ಭೇಟಿ ನೀಡಿದ ಅವರು ವಿಶೇಷ ಪೂಜೆ ಹಾಗೂ ದೈವ ಸೇವೆ ಸಲ್ಲಿಸಿದ್ದಾರೆ.ಕರಾವಳಿಯಲ್ಲಿ ಶಕ್ತಿಶಾಲಿ ದೈವಗಳೆಂದು ನಂಬಲಾಗುವ ಮಂತ್ರಜಾವದೆ (ಮಂತ್ರದೇವತೆ) ಹಾಗೂ ಗುಳಿಗ ದೈವಗಳ ಆರಾಧನೆ ನಡೆಸಿ ಪತಿಯ ಒಳಿತಿಗಾಗಿ ಪ್ರಾರ್ಥಿಸಿದ್ದಾರೆ ಎನ್ನಲಾಗಿದೆ. ಈ ಹಿಂದೆ ಕೂಡ ವಿಜಯಲಕ್ಷ್ಮಿ ಅವರು ಹಲವು ದೇವಾಲಯಗಳು ಹಾಗೂ ದೈವ ಸ್ಥಾನಗಳಿಗೆ ಭೇಟಿ ನೀಡಿ ದರ್ಶನ್ ಅವರ ಒಳಿತಿಗಾಗಿ ವಿಶೇಷ ಪೂಜೆ ಮತ್ತು ಪ್ರಾರ್ಥನೆಗಳನ್ನು ಸಲ್ಲಿಸಿದ್ದರು.ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕಳೆದ ಕೆಲವು ತಿಂಗಳುಗಳಿಂದ ದರ್ಶನ್ಗೆ ಹಲವು ಬೆಳವಣಿಗೆಗಳು ಪ್ರತಿಕೂಲವಾಗಿವೆ. ಸಾಕ್ಷಿಗಳಿಗೆ ಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧಿಸಿದ ಬೆಳವಣಿಗೆಗಳೂ ಪ್ರಕರಣದಲ್ಲಿ ದರ್ಶನ್ಗೆ ಸಂಕಷ್ಟ ತಂದಿದ್ದವು. ಬಳಿಕ ನ್ಯಾಯಾಲಯದಲ್ಲಿ ದರ್ಶನ್ ಸಲ್ಲಿಸಿದ್ದ ಖುದ್ದು ಹಾಜರಿಯಿಂದ ವಿನಾಯಿತಿ ಕೋರುವ ಅರ್ಜಿಗೂ ಹಿನ್ನಡೆಯಾಗಿತ್ತು. ಇದೀಗ ಪ್ರಕರಣದ ಪ್ರಮುಖ ಬೆಳವಣಿಗೆಯೊಂದರಲ್ಲಿ ದರ್ಶನ್ ಅವರ ಆಪ್ತನಾಗಿದ್ದ ಪ್ರದೋಶ್ ಮಾಫಿ ಸಾಕ್ಷಿಯಾಗಿ ಬದಲಾಗಿದ್ದಾರೆ. ಪ್ರದೋಶ್ ನೀಡಿರುವ ಹೇಳಿಕೆಯನ್ನು ಪರಿಗಣಿಸಬಾರದು ಎಂದು ದರ್ಶನ್ ಪರ ಸಲ್ಲಿಸಲಾಗಿದ್ದ ಅರ್ಜಿಯೂ ತಿರಸ್ಕೃತವಾಗಿರುವುದು ಮತ್ತೊಂದು ಹಿನ್ನಡೆಯಾಗಿದೆ. ಕಾನೂನು ಹೋರಾಟದಲ್ಲಿ ದರ್ಶನ್ಗೆ ಸತತ ಹಿನ್ನಡೆಗಳು ಎದುರಾಗುತ್ತಿರುವ ಹಿನ್ನೆಲೆಯಲ್ಲಿ ವಿಜಯಲಕ್ಷ್ಮಿ ಅವರು ಇದೀಗ ಕರಾವಳಿಯ ದೈವಗಳ ಮೊರೆ ಹೋಗಿರುವುದು ಗಮನ ಸೆಳೆದಿದೆ. ವಿಶೇಷ ಪೂಜೆ, ದೈವ ಸೇವೆ ಹಾಗೂ ಪ್ರಾರ್ಥನೆಗಳ ಮೂಲಕ ಪತಿಯ ಸಂಕಷ್ಟಗಳು ದೂರವಾಗಲಿ ಎಂದು ಅವರು ಪ್ರಾರ್ಥಿಸಿದ್ದಾರೆ ಎನ್ನಲಾಗಿದೆ.



