ಕಳೆದ ಎರಡು ವಾರದಿಂದ ಏರಿಕೆಯನ್ನು ಕಾಣುತ್ತ ಬಂದಿದ್ದ ಮೊಟ್ಟೆ ದರ ಈಗ ಸಾರ್ವಕಾಲಿಕ ದಾಖಲೆ ಬೆಲೆ 8ಕ್ಕೆ ತಲುಪಿದೆ. ರಖಂ ಬೆಲೆಯಲ್ಲಿ ಒಂದಕ್ಕೆ 7.20 ರೂ. ಮಾರಾಟವಾಗುತ್ತಿದೆ ಎಂದು ಮೊಟ್ಟೆ ವ್ಯಾಪಾರಿಗಳು, ಲೈನ್ ಸೇಲ್ ವ್ಯಾಪಾರಸ್ಥರು ತಿಳಿಸಿದ್ದಾರೆ.
ಕಳೆದ ಗುರುವಾರ ರಖಂ ಬೆಲೆಯಲ್ಲಿ ಒಂದಕ್ಕೆ 6.80 ಇತ್ತು, ಮಂಗಳವಾರ 7ಕ್ಕೆ ತಲುಪಿದ್ದರೆ ಗುರುವಾರ 7.20ಕ್ಕೆ ತಲುಪಿ ಬೆಲೆಯಲ್ಲಿ ದಾಖಲೆ ಮಾಡಿದೆ. ಈ ಹಿಂದಿನ ವರ್ಷಗಳಲ್ಲಿ ಅತೀ ಹೆಚ್ಚು ಎಂದರೆ ಎರಡು ದಿನ 6.90ಕ್ಕೆ ಮಾರಾಟವಾಗಿತ್ತು ಎಂದು ಕಳೆದ 40 ವರ್ಷಗಳಲ್ಲಿ ಮೊಟ್ಟೆ ವ್ಯಾಪಾರ ಮಾಡುತ್ತಿರುವ ಸುಂಕದಕಟ್ಟೆ ನಿತ್ಯಾನಂದ ಶೆಟ್ಟಿ ತಿಳಿಸಿದ್ದಾರೆ.
ಮುಂದೆ ಹೊಸವರ್ಷ, ಕ್ರಿಸ್ಮಸ್ ಬರುವ ಕಾರಣ ಮೊಟ್ಟೆ ಬೆಲೆಯಲ್ಲಿ ಇನ್ನೂ ಏರಿಕೆಯಾಗುವ ಸಂಭವವಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಕೇಕ್ಗಳಿಗೆ ಮೊಟ್ಟೆ ಅತೀ ಹೆಚ್ಚು ಉಪಯೋಗವಾಗುವ ಕಾರಣ ದರ ಏರುವ ಸಾಧ್ಯತೆಯಿದೆ ಎಂಬುದು ವ್ಯಾಪಾರಿಗಳ ಲೆಕ್ಕಾಚಾರವಾಗಿದೆ.
ಬೇಡಿಕೆ ಜಾಸ್ತಿ; ಮೊಟ್ಟೆ ಉತ್ಪಾದನೆ ಕಡಿಮೆ
ಅಂಗನವಾಡಿ, ಶಾಲೆಗಳಿಗೆ ಮೊಟ್ಟೆ ಬಳಕೆ, ಈ ತಿಂಗಳಲ್ಲಿ ಹೆಚ್ಚು ಕಾರ್ಯಕ್ರಮಗಳು ಇರುವುದರಿಂದ ಬೇಡಿಕೆ ಜಾಸ್ತಿಯಾಗಿದೆ. ಈ ಹಿಂದೆ ಕೋಳಿಗೆ ಆಹಾರವಾಗಿ ಜೋಳ ಉಪಯೋಗ ಮಾಡುತ್ತಿದ್ದರು. ಈಗ ಜೋಳದ ದರ ಏರಿಕೆಕಂಡಿದೆ. ಜೋಳವನ್ನು ಬೇಯಿಸಿ ತಿನ್ನುವ ಹಾಗೂ ಪದಾರ್ಥಕ್ಕೆ ಬಳಸುವ ಕಾರಣ ಈಗ ಬೇಡಿಕೆ ಬಂದಿದೆ. ಕೋಳಿಯ ಆಹಾರ ವಸ್ತುಗಳು ಏರಿಕೆಯಿಂದ ಫಾರ್ಮ್ ಗಳು ನಷ್ಟವಾಗಿ ಮುಚ್ಚಿವೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಇದರಿಂದಾಗಿ ಉತ್ಪಾದನೆ ಕಡಿಮೆಯಾಗಿದೆ. ಬೇಡಿಕೆ ಪೂರೈಸಲು ಈಗ ದಾವಣಗೆರೆ, ಮೈಸೂರಿನಿಂದ ಮೊಟ್ಟೆಗಳು ಬರುತ್ತಿವೆ ಎನ್ನಲಾಗಿದೆ.





