ಮಂಗಳೂರು: ರಾಜ್ಯದ ಹಲವು ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ ಇಮೇಲ್ಗಳು ಬಂದ ಹಿನ್ನೆಲೆಯಲ್ಲಿ, ಸೋಮವಾರ ಕರ್ನಾಟಕದ ವಿವಿಧ ಭಾಗಗಳ ನ್ಯಾಯಾಲಯದ ಆವರಣದಲ್ಲಿ ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಚಾಮರಾಜನಗರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಮತ್ತೊಂದು ಬಾಂಬ್ ಬೆದರಿಕೆ ಇಮೇಲ್ ಬಂದಿದ್ದು, ಒಂದು ವಾರದೊಳಗೆ ಬಂದ ಮೂರನೇ ಬೆದರಿಕೆ ಇದಾಗಿದೆ. ವರದಿಗಳ ಪ್ರಕಾರ, ಹಿಂದಿನ ಎರಡು ಇಮೇಲ್ಗಳನ್ನು ಒಂದೇ ಇಮೇಲ್ ವಿಳಾಸದಿಂದ ಕಳುಹಿಸಲಾಗಿತ್ತು, ಆದರೆ ಇತ್ತೀಚಿನ ಬೆದರಿಕೆ ಸಂದೇಶವು ಬೇರೆ ಇಮೇಲ್ ವಿಳಾಸದಿಂದ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು, ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ ಹಾಗೂ ಶ್ವಾನ ದಳದ ಸಿಬ್ಬಂದಿಯೊಂದಿಗೆ ನ್ಯಾಯಾಲಯದ ಆವರಣದಲ್ಲಿ ಕೂಲಂಕಷವಾಗಿ ತಪಾಸಣೆ ನಡೆಸಿದರು.
ಮಂಗಳೂರು ಜಿಲ್ಲಾ ನ್ಯಾಯಾಲಯದ ಸಂಕೀರ್ಣಕ್ಕೂ ಸಹ ಬಾಂಬ್ ಬೆದರಿಕೆ ಇಮೇಲ್ ಬಂದಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ ಹಾಗೂ ಶ್ವಾನ ದಳದ ಸಿಬ್ಬಂದಿ ಇಡೀ ಆವರಣದಲ್ಲಿ ವ್ಯಾಪಕ ಶೋಧ ನಡೆಸಿದರು. ಯಾವುದೇ ಅನುಮಾನಾಸ್ಪದ ವಸ್ತುಗಳು ಸಿಗದ ಹಿನ್ನೆಲೆಯಲ್ಲಿ, ಈ ಬೆದರಿಕೆ ಕೇವಲ ಹುಸಿ ಎಂದು ಘೋಷಿಸಲಾಯಿತು. ಇದೇ ಮಾದರಿಯಲ್ಲಿ ಹಾವೇರಿ ನ್ಯಾಯಾಲಯಕ್ಕೂ ಬಾಂಬ್ ಬೆದರಿಕೆ ಇಮೇಲ್ ಬಂದಿದೆ. ಅಧಿಕಾರಿಗಳು ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ನ್ಯಾಯಾಲಯದ ಆವರಣದಲ್ಲಿ ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.



