ಬೆಂಗಳೂರು, ಮೇ 30: ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ನೂತನ ಸಿಎಂ ಆಯ್ಕೆ ಸಂಬಂಧ ಇಂದು (ಮೇ 30) ಸಿಎಲ್ಪಿ ಸಭೆ ಕರೆಯಲಾಗಿದೆ. ಡಿ.ಕೆ. ಶಿವಕುಮಾರ್ ಅವರೇ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾಗುವುದು ಬಹುತೇಕ ಕನ್ಫರ್ಮ್ ಆಗಿರುವ ಹಿನ್ನೆಲೆ ಅವರು ಹಾಲಿ ಜವಾಬ್ದಾರಿ ನಿರ್ವಹಿಸುತ್ತಿದ್ದ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆಯೂ ಹಲವರು ಕಣ್ಣಿಟ್ಟಿದ್ದಾರೆ. ಹೀಗಿದ್ದರೂ ಈ ಸ್ಥಾನಕ್ಕೆ ಸತೀಶ್ ಜಾರಕಿಹೊಳಿ ಹೆಸರು ಈವರೆಗೂ ಮುಂಚೂಣಿಯಲ್ಲಿತ್ತು. ಆದರೆ ರಾಜ್ಯ ಕಾಂಗ್ರೆಸ್ನ ಅಧ್ಯಕ್ಷ ಗಾದಿಗೆ ಈಗ ಮತ್ತೋರ್ವರ ಹೆಸರು ಸಪ್ರೈಸ್ ಎಂಟ್ರಿ ಆಗಿರೋದು ಭಾರಿ ಕುತೂಹಲ ಮೂಡಿಸಿದೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನದ ರೇಸ್ಗೆ ಹರಿಪ್ರಸಾದ್ ಎಂಟ್ರಿ!
ಕೆಪಿಸಿಸಿ ಅಧ್ಯಕ್ಷರ ರೇಸ್ನಲ್ಲಿ ಬಿ.ಕೆ.ಹರಿಪ್ರಸಾದ್ ಹೆಸರು ದಿಢೀರ್ ಮುನ್ನೆಲೆಗೆ ಬಂದಿದ್ದು, ಒಬಿಸಿ ಕೋಟಾದಡಿ ಪಕ್ಷದ ಅಧ್ಯಕ್ಷ ಗಾದಿಯನ್ನು ಅವರಿಗೆ ನೀಡುವ ಸಂಬಂಧ ಚರ್ಚೆ ನಡೆದಿದೆ. ಮಂತ್ರಿಸ್ಥಾನಕ್ಕೆ ಸತೀಶ್ ಪಟ್ಟು ಹಿಡಿದರೆ ಕಾಂಗ್ರೆಸ್ ಹೈಕಮಾಂಡ್ ಎದುರು ಹರಿಪ್ರಸಾದ್ ಹೆಸರು ಪ್ರಸ್ತಾಪ ಸಾಧ್ಯತೆ ಇದ್ದು, ಹರಿಪ್ರಸಾದ್ಗೆ ಕೆ.ಸಿ.ವೇಣುಗೋಪಾಲ್ ಬೆಂಬಲ ಕೂಡ ಇದೆ ಎನ್ನಲಾಗಿದೆ. ಇಂದು ನಡೆಯಲಿರುವ ಶಾಸಕಾಂಗ ಪಕ್ಷದ ಸಭೆಯಲ್ಲಿಯೇ ಹಿರಿಯ ಶಾಸಕರಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಪ್ರಸ್ತಾಪವನ್ನೂ ನಿರೀಕ್ಷಿಸಲಾಗಿದೆ.





