ಉಪ್ಪಿನಂಗಡಿ, ಮೇ. 23: ಕೊಕ್ಕಡದ ಪಟ್ಟೂರಿಗೆ ತೆರಳುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಸುಮಾರು 70 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದ ಘಟನೆ ಉಪ್ಪಿನಂಗಡಿ ಸಮೀಪದ ಪಂಜಳ ಎಂಬಲ್ಲಿ ಮೇ 22ರಂದು ಸಂಜೆ ನಡೆದಿದ್ದು, ಕಾರಿನಲ್ಲಿದ್ದವರು ಪವಾಡವೆಂಬಂತೆ ಅದೃಷ್ಟವಶಾತ್ ಜೀವಪಾಯದಿಂದ ಪಾರಾಗಿದ್ದಾರೆ.
ಅಪಘಾತಕ್ಕೀಡಾದ ಕಾರಿನಲ್ಲಿ ಪಟ್ರಮೆ ಗ್ರಾಮದ ದೇರಾಜೆ ನಿವಾಸಿ ಹಾಗೂ ಪಟ್ಟೂರು ಶ್ರೀರಾಮ ವಿದ್ಯಾಸಂಸ್ಥೆಯ ಸಂಚಾಲಕ ಪ್ರಶಾಂತ್ ದೇರಾಜೆ ಮತ್ತು ಅವರ ಸಹೋದರ ಪ್ರವೀಣ್ ದೇರಾಜೆ ಪ್ರಯಾಣಿಸುತ್ತಿದ್ದರು. ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಕಾರು ಹೆದ್ದಾರಿ ಬದಿಯಿಂದ ಕೆಳಕ್ಕೆ ಉರುಳಿ ನದಿ ಬದಿಯ ಆಳವಾದ ಕಂದಕಕ್ಕೆ ಬಿದ್ದಿದೆ. ಘಟನೆಯ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದವರು ಅಲ್ಪಸ್ವಲ್ಪ ತರಚು ಗಾಯಗಳೊಂದಿಗೆ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಹಾಗೂ ಪರಿಚಿತರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ಸಹಕರಿಸಿದರು.





