ವೇಣೂರು: ಪಡಂಗಡಿ ಗ್ರಾಮದ ಕಾರ್ಯಣ ಮನೆಯ ಶ್ರೀಮತಿ ತುಂಗಮ್ಮ ಶೆಟ್ಟಿಯವರಿಗೆ ಸೇರಿದ ಕೋಳಿ ಫಾರಂ ಶೆಡ್ ನಿನ್ನೆ ಸಂಜೆ ಸುರಿದ ಮಳೆ, ಬಿರುಗಾಳಿಗೆ ಬಿದ್ದು ಸಂಪೂರ್ಣ ನಾಶವಾಗಿ ಲಕ್ಷಗಟ್ಟಲೆ ನಷ್ಟ ಉಂಟಾಗಿದೆ.
ಘಟನೆಯಿಂದ ಸಾವಿರಾರು ಕೋಳಿಮರಿಗಳು ಮೃತಪಟ್ಟಿವೆ. ರೈತ ತುಂಗಮ್ಮ ಶೆಟ್ಟಿ ಅವರು ಸಾಲ ಸೋಲ ಮಾಡಿ ಜೀವನ ಕಂಡುಕೊಳ್ಳುವ ನಿಟ್ಟಿನಲ್ಲಿ ತಮ್ಮ ಜಮೀನಿನಲ್ಲಿ ಕೋಳಿ ಸಾಕಣೆ ಮಾಡುತ್ತಿದ್ದರು.
ಜಮೀನಿನಲ್ಲಿ ಶೆಡ್ ನಿರ್ಮಿಸಿ 3000 ಕೋಳಿ ಮರಿಗಳನ್ನು ಹತ್ತು ದಿನಗಳ ಹಿಂದೆಯಷ್ಟೇ ತಂದು ಸಾಕಲಾಗುತ್ತಿತ್ತು. ಇನ್ನು 26 ದಿನಗಳ ನಂತರ ಮಾರಾಟ ಮಾಡಬೇಕಿತ್ತು. ಆದರೆ ಭಾರಿ ಪ್ರಮಾಣದ ಗಾಳಿ ಇವರ ಆಸೆಗೆ ತಣ್ಣೀರು ಎರಚಿದೆ. ಇಡೀ ಕಟ್ಟಡ, ಹಂಚುಗಳು ಮಳೆ ಪಾಲಾಗಿದ್ದು, ರೈತೆ ತುಂಗಮ್ಮ ಶೆಟ್ಟಿಯವರಿಗೆ ದಿಕ್ಕು ತೋಚದಂತಾಗಿದೆ. ರಾಜ್ಯ ಸರಕಾರ ಸಂಕಷ್ಟದ ಸುಳಿಗೆ ಸಿಲುಕಿರುವ ಈ ಮಹಿಳೆಯ ಕುಟುಂಬದ ರಕ್ಷಣೆಗೆ ಬರಬೇಕಿದೆ.
ಕೋಳಿಗಳಿಗೆ ತಂದಿದ್ದ ಆಹಾರ ಹಾಗೂ ಶೆಡ್ಗಳಿಗೆ ಹಾನಿ ಸೇರಿ ಒಟ್ಟಾರೆ 10 ಲಕ್ಷ ರೂ.ಗಿಂತ ಹೆಚ್ಚಿನ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ನಾಶವಾದ ಕೋಳಿ ಫಾರಂ ಶೆಡ್ಗೆತುಳುನಾಡು ಸಾಕಾಣಿಕೆ ರೈತ ಒಕ್ಕೂಟದ ಅಧ್ಯಕ್ಷರಾದ ನಾರಾಯಣ ಪೂಜಾರಿ ಉಚ್ಚೂರು, ಫಾರಂರುಗಳಾದ ರವಿಚಂದ್ರ ಶೆಟ್ಟಿ ಬಡೆಕೊಡಿ, ಪ್ರಶಾಂತ್ ಪೂಜಾರಿ ಸುಧೆಕಾರ್ ಹಾಗೂ ಬೆಳ್ತಂಗಡಿ ಶ್ರೀ ಗುರುನಾಯಣ ಸ್ವಾಮಿ ಸೇವಾ ಸಂಘದ ನಿರ್ದೇಶಕರಾದ ರವೀಂದ್ರ ಬಿ. ಅಮೀನ್ ನಾಲ್ಕೂರು ರವರು ಭೇಟಿ ಕೊಟ್ಟು ಸಾಂತ್ವನ ಹೇಳಿ ಸರ್ಕಾರ ಮಟ್ಟದಲ್ಲಿ ಬರುವ ಪರಿಹಾರಕ್ಕೆ ಸಹಕಾರ ಕೊಡುವುದಾಗಿ ಭರವಸೆ ನೀಡಿದರು.





