ಉಡುಪಿಯ ಅಬಕಾರಿ ಉಪ ಆಯುಕ್ತ ಶ್ರೀನಿವಾಸ್ ಟಿ. ಎಂ. ಅವರ ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಲೋಕಾಯುಕ್ತ ಅಧಿಕಾರಿಗಳು 15 ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ 8.69 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಮತ್ತು ಚರಾಸ್ತಿಗಳು ಪತ್ತೆಯಾಗಿವೆ. 11 ನಿವೇಶನಗಳು, 6 ಮನೆಗಳು, 31 ಎಕರೆ ಕೃಷಿ ಭೂಮಿ ಹಾಗೂ ಚಿನ್ನಾಭರಣ, ನಗದು ಜಪ್ತಿ ಮಾಡಲಾಗಿದೆ. ಶ್ರೀನಿವಾಸ್ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಅಮಾನತು ಆದೇಶದ ಸಾಧ್ಯತೆ ಇದೆ.
ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಅಬಕಾರಿ ಉಪ ಆಯುಕ್ತ (DC) ಶ್ರೀನಿವಾಸ್ ಟಿ. ಎಂ. ಅವರಿಗೆ ಸಂಬಂಧಿಸಿದ 15 ವಿವಿಧ ಸ್ಥಳಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಸರಣಿ ದಾಳಿ ನಡೆಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಒಟ್ಟು 8 ಕೋಟಿ 69 ಲಕ್ಷ ರೂಪಾಯಿ ಮೌಲ್ಯದ ಅಸಮತೋಲನ ಆಸ್ತಿ ಪತ್ತೆಯಾಗಿದೆ. ಲೋಕಾಯುಕ್ತ ಮಂಗಳೂರು ವಿಭಾಗದ ಎಸ್ಪಿ ದಿನೇಶ್ ಕುಮಾರ್ ಅವರ ನೇತೃತ್ವದಲ್ಲಿ ನಡೆದ ಈ ದಾಳಿಯಲ್ಲಿ ಶ್ರೀನಿವಾಸ್ ಟಿ. ಎಂ. ಅವರಿಗೆ ಸಂಬಂಧಿಸಿದ ಆಸ್ತಿಗಳನ್ನು ಪತ್ತೆ ಮಾಡಿದ್ದಾರೆ.
ಸ್ಥಿರ ಆಸ್ತಿಗಳು ಒಟ್ಟು 6,90,64,716 ರೂ. ಇದರಲ್ಲಿ ವಿವಿಧೆಡೆ 11 ನಿವೇಶನಗಳು ಇವೆ. 6 ಸುಸಜ್ಜಿತ ವಾಸದ ಮನೆಗಳು ಇದೆ. 31 ಎಕರೆ ಕೃಷಿ ಭೂಮಿ ಇದೆ ಎಂದು ಹೇಳಲಾಗಿದೆ. ಚರಾಸ್ತಿಗಳು ಒಟ್ಟು 2,66,90,001 ರೂ. ಇದರಲ್ಲಿ 3,95,941 ಹಣ, 1.47 ಕೋಟಿ ರೂ. ಮೌಲ್ಯದ ಚಿನ್ನದ ಆಭರಣಗಳು, 17 ಲಕ್ಷ ರೂ. ಬೆಲೆಬಾಳುವ ಕಾರುಗಳು, 25.75 ಲಕ್ಷ ರೂ. ನಗದು ಠೇವಣಿ, 72.68 ಲಕ್ಷ ರೂ. ಮೌಲ್ಯದ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿದೆ.
ಅಧಿಕಾರಿ ಶ್ರೀನಿವಾಸ್ ಅವರು ತಮ್ಮ ಆದಾಯದ ಮೂಲಕ್ಕಿಂತಲೂ ಹೆಚ್ಚಿನ ಆಸ್ತಿ ಹೊಂದಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಲೋಕಾಯುಕ್ತ ಪೊಲೀಸರು ಈ ದಾಳಿಯನ್ನು ನಡೆಸಿದ್ದಾರೆ. ಮಂಗಳೂರು, ಉಡುಪಿ ಸೇರಿದಂತೆ ರಾಜ್ಯದ 15 ಕಡೆಗಳಲ್ಲಿ ಏಕಕಾಲಕ್ಕೆ ಎರಡು ದಿನಗಳ ಕಾಲ ಈ ಶೋಧ ಕಾರ್ಯ ನಡೆದಿದೆ. ಲೋಕಾಯುಕ್ತ ಪೊಲೀಸರು ಶ್ರೀನಿವಾಸ್ ಟಿ. ಎಂ. ಅವರ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು ಈಗಾಗಲೇ ದಾಖಲಿಸಿಕೊಂಡಿದ್ದಾರೆ. ಮಾರ್ಚ್ 13ರ ಹೊತ್ತಿಗೆ ಅವರ ವಿರುದ್ಧ ಅಧಿಕೃತವಾಗಿ ತನಿಖೆ ಆರಂಭವಾಗಿದೆ.





