ಬೆಂಗಳೂರು-ಮಂಗಳೂರು ನಡುವೆ ಶೀಘ್ರದಲ್ಲೇ ಸಂಚರಿಸಲಿದೆ ವಂದೇ ಭಾರತ್ ರೈಲು
ಬಹುನಿರೀಕ್ಷಿತ ವಂದೇ ಭಾರತ್ ರೈಲು ಬೆಂಗಳೂರು ಮತ್ತು ಮಂಗಳೂರು ನಡುವೆ ಶೀಘ್ರದಲ್ಲೇ ಸಂಚರಿಸಲಿದೆ. ಸಕಲೇಶಪುರ-ಸುಬ್ರಹ್ಮಣ್ಯ ಮಾರ್ಗದ ವಿದ್ಯುದ್ದೀಕರಣ ಪೂರ್ಣಗೊಂಡ ನಂತರ ಈ ಅರೆ-ಹೈ-ಸ್ಪೀಡ್ ರೈಲು ಸೇವೆ ಆರಂಭವಾಗಲಿದ್ದು, 9-10 ಗಂಟೆಗಳ ಪ್ರಯಾಣವನ್ನು 5 ಗಂಟೆಗೆ ಇಳಿಸಲಿದೆ. ಇದು ಕರಾವಳಿ, ವ್ಯಾಪಾರ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿದೆ.
ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರಸ್ತೆಯ ನಡುವಿನ 55 ಕಿ.ಮೀ ಘಾಟ್ ವಿಭಾಗದಲ್ಲಿ ವಿದ್ಯುದ್ದೀಕರಣ ಪೂರ್ಣಗೊಂಡ ನಂತರ ಯೋಜನೆಗೆ ಚಾಲನೆ ನೀಡಲಾಗುವುದು. ಈಗಾಗಲೇ ಈ ವಿದ್ಯುದ್ದೀಕರಣ ಕಾಮಗಾರಿ ಪೂರ್ಣಗೊಳ್ಳುತ್ತ ಬಂದಿದೆ. ಅದಷ್ಟು ಬೇಗ ಈ ರೈಲು ಸಂಚಾರ ಮಾಡಲಿದೆ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.
ಮಂಗಳೂರು ಪ್ರದೇಶದ ಜನರ ಬಹುದಿನಗಳ ಬೇಡಿಕೆಯಾಗಿರುವ ವಂದೇ ಭಾರತ್ ರೈಲು ಓಡಾಟ ಆರಂಭಿಸುವ ಸಮಯ ಹತ್ತಿರವಾಗಿದೆ ಎಂದು ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸಾಮಾನ್ಯ ರೈಲುಗಳು ಈ ಮಾರ್ಗವನ್ನು ಕ್ರಮಿಸಲು ಸರಿಸುಮಾರು 9 ರಿಂದ 10 ಗಂಟೆಗಳನ್ನು ತೆಗೆದುಕೊಳ್ಳುತ್ತದೆ, ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ ವಂದೇ ಭಾರತ್ ರೈಲು ಅದನ್ನು ಕೇವಲ 5 ಗಂಟೆಗಳವರೆಗೆ ಕಡಿಮೆ ಮಾಡಬಹುದು, ಇದು ವ್ಯಾಪಾರ ಪ್ರಯಾಣಿಕರು ಮತ್ತು ರಜಾದಿನಗಳಲ್ಲಿ ಈ ರೈಲು ಹೆಚ್ಚು ಸಹಾಯವಾಗಲಿದೆ.






