ಚಿತ್ರದುರ್ಗ(ಕರ್ನಾಟಕ ವಾರ್ತೆ)ಫೆ.16:
ಸಂವಿಧಾನ ಜಾಗೃತಿ ಜಾಥಾ ಇದೇ ಫೆ. 17ರಂದು ಹೊಸದುರ್ಗ ತಾಲ್ಲೂಕಿನ ಮತ್ತೋಡು, ಕಾರೇಹಳ್ಳಿ, ಅತ್ತಿಮಗ್ಗೆ, ಹುಣವಿನಡು, ದೇವಪುರ, ದೊಡ್ಡಘಟ್ಟ, ಜಾನಕಲ್ ಗ್ರಾಮ ಪಂಚಾಯತಿಗಳಿಗೆ ಸ್ಥಬ್ದಚಿತ್ರ ವಾಹನವು ಸಂಚರಿಸಿ, ಸಾರ್ವಜನಿಕರಲ್ಲಿ ಸಂವಿಧಾನದ ಮಹತ್ವ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ಜರುಗಲಿದೆ.
ಭಾರತದ ಸಂವಿಧಾನ ಅಂಗೀಕಾರಗೊಂಡ 75ನೇ ವರ್ಷದ ಆಚರಣೆಯ ಪ್ರಯುಕ್ತ ಜ.26 ರ ಗಣರಾಜ್ಯೋತ್ಸವ ದಿನದಂದು ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ್ ಅವರು “ಸಂವಿಧಾನ ಜಾಗೃತಿ ಜಾಥಾ” ಕ್ಕೆ ಚಾಲನೆ ನೀಡಿದ್ದರು. ಎಲ್‍ಇಡಿ ವಾಹನದೊಂದಿಗೆ, ಬುದ್ದ, ಬಸವ, ಅಂಬೇಡ್ಕರ್ ಪುತ್ಥಳಿಯನ್ನು ಒಳಗೊಂಡಿರುವ ವಿಶೇಷ ವಾಹನದ ಜಾಥಾ ಮೂಲಕ ಜಿಲ್ಲೆಯ ಪ್ರತಿಯೊಂದು ನಗರ, ಪಟ್ಟಣ ಮತ್ತು ಗ್ರಾಮಗಳಲ್ಲಿ ಸಂಚರಿಸಿ ಸಂವಿಧಾನದ ಮಹತ್ವ ಕುರಿತು ಅರಿವು ಮೂಡಿಸುವ ಕಾರ್ಯ ನಡೆಯುತ್ತಿದೆ.
ಸಂವಿಧಾನದ ಆಶಯ ಮತ್ತು ಮೌಲ್ಯಗಳನ್ನು ಪ್ರದರ್ಶಿಸುವ ಎಲ್‍ಇಡಿ ಪರದೆ ಹೊಂದಿರುವ ಸ್ತಬ್ಧಚಿತ್ರವು ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಫೆ.23 ರವರೆಗೆ ಸಂಚರಿಸಲಿದೆ.
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಜಗದೀಶ್ ಹೆಬ್ಬಳ್ಳಿ ಅವರು ಮಾಹಿತಿ ನೀಡಿ, ಗುರುವಾರದಂದು ಹೊಸದುರ್ಗ ತಾಲ್ಲೂಕಿನ ಹೊಸದುರ್ಗ ತಾಲ್ಲೂಕಿನ ಶ್ರೀರಾಂಪುರ, ಎಸ್.ನೇರಲಕೆರೆ, ಕೈನಡು, ದೊಡ್ಡತೇಕಲವಟ್ಟಿ, ಕಂಚೀಪುರ, ಸಿ.ಬಿ.ಕೆರೆ, ಜಿ.ನೇರಲಕೆರೆ ಗ್ರಾಮ ಪಂಚಾಯಿತಿಗಳಲ್ಲಿ ಸಂವಿಧಾನ ಜಾಗೃತಿ ಜಾಥಾ ಸಂಚರಿಸಿದ್ದು, ಎಲ್ಲೆಡೆ ಅಭೂತಪೂರ್ವ ಸ್ವಾಗತ ದೊರೆತಿದೆ. ಗ್ರಾಮ ಪಂಚಾಯಿತಿಗಳಲ್ಲಿ ವಿಶೇಷವಾಗಿ ಬೈಕ್ ರ್ಯಾಲಿ, ಮಕ್ಕಳಿಂದ ಸಾಂಸ್ಕøತಿಕ ನೃತ್ಯ, ವೀರಗಾಸೆ ಕಾರ್ಯಕ್ರಮ ಹಾಗೂ ಹೆಣ್ಣು ಮಕ್ಕಳಿಂದ ಕುಂಭ ಮೇಳ ಕಾರ್ಯಕ್ರಮ ಹಮ್ಮಿಕೊಂಡು ಯಶಸ್ವಿಗೊಳಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹೊಸದುರ್ಗ ತಾಲ್ಲೂಕಿನ ನೋಡಲ್ ಅಧಿಕಾರಿಗಳು, ತಹಶೀಲ್ದಾರ್, ತಾ.ಪಂ ಇಒ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಪಿಡಿಒಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು, ವಿದ್ಯಾರ್ಥಿಗಳು ಸಹ ಭಾಗವಹಿಸಿದ್ದರು.

+ There are no comments
Add yours